ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಇಂದು ಟಿಎಂಸಿಯ ಲೋಕಸಭಾ ಮುಖ್ಯ ಸಚೇತಕ ಹುದ್ದೆಯಿಂದ ಕೆಳಗಿಳಿದಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ನಡೆದ ಟಿಎಂಸಿ ಸಂಸದರ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ ನಂತರ ಕಲ್ಯಾಣ್ ಬ್ಯಾನರ್ಜಿ ತಮ್ಮ ರಾಜೀನಾಮೆ ಘೋಷಿಸಿದರು.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಇಬ್ಬರು ಸಂಸದರ ನಡುವಿನ ಭಿನ್ನಮತ ಸಾರ್ವಜನಿಕವಾಗಿ ಸ್ಫೋಟಗೊಂಡಿದ್ದು, ಹಿರಿಯ ನಾಯಕರು ಮಾಧ್ಯಮಗಳಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಸಂಸದೆ ಮಹುವಾ ಮೊಯಿತ್ರಾ ಮತ್ತು ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ನಡುವೆ ತೀವ್ರ ವಾಗ್ವಾದ ನಡೆಯುತ್ತಿದೆ. ಇತ್ತೀಚೆಗೆ ಮಾತನಾಡಿದ ಮಹುವಾ ಮೊಯಿತ್ರಾ, ನೀವು ಹಂದಿಯೊಂದಿಗೆ ಕುಸ್ತಿಯಾಡಬಾರದು. ಹಂದಿಗೆ ಅದು ಇಷ್ಟವಾಗುತ್ತದೆ. ಆದರೆ ನೀವು ಕೊಳಕಾಗುತ್ತೀರಿ ಎಂದು ಕಲ್ಯಾಣ್ ಬ್ಯಾನರ್ಜಿಯವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕಲ್ಯಾಣ್ ಬ್ಯಾನರ್ಜಿ, ಮಹುವಾ ಮೊಯಿತ್ರಾರ ವೈಯಕ್ತಿಕ ಜೀವನದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದರು. ಬಿಜೆಡಿಯ ಮಾಜಿ ಸಂಸದ ಮತ್ತು ಹಿರಿಯ ವಕೀಲ ಪಿನಾಕಿ ಮಿಶ್ರಾ ಅವರೊಂದಿಗಿನ ಮಹುವಾ ವಿವಾಹದ ಕುರಿತು ಲೇವಡಿ ಮಾಡಿದ್ದರು. ಮೊಯಿತ್ರಾ ನನ್ನನ್ನು ಸ್ತ್ರೀ ದ್ವೇಷಿ ಎಂದು ಹೇಳುತ್ತಾರೆ. ಅವರು 40 ವರ್ಷಗಳ ಕುಟುಂಬವನ್ನು ಮುರಿದು 65 ವರ್ಷದ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಈ ಬಗ್ಗೆ ದೇಶದ ಮಹಿಳೆಯರೇ ನಿರ್ಧರಿಸುತ್ತಾರೆ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ, ಭಾರತದಲ್ಲಿ ತೀವ್ರ ಸ್ತ್ರೀದ್ವೇಷಿಗಳು, ಲೈಂಗಿಕವಾಗಿ ನಿರಾಶೆಗೊಂಡವರು, ಭ್ರಷ್ಟ ಪುರುಷರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಅವರು ಸಂಸತ್ತಿನಲ್ಲಿ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈ ವಿಚಾರದಲ್ಲಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಮೌನವನ್ನೂ ಅವರು ದುರದೃಷ್ಟಕರ. ಪಕ್ಷದ ನಾಯಕತ್ವವು ಸೂಕ್ತ ಸಮಯದಲ್ಲಿ ಮಾತನಾಡುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಕಲ್ಯಾಣ್ ಬ್ಯಾನರ್ಜಿ, “ಸಾರ್ವಜನಿಕ ಪಾಡ್‌ಕ್ಯಾಸ್ಟ್‌ನಲ್ಲಿ ಮಹುವಾ ಮೊಯಿತ್ರಾ ಅವರು ಇತ್ತೀಚೆಗೆ ಮಾಡಿದ ವೈಯಕ್ತಿಕ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ಸಹ ಸಂಸದರನ್ನು “ಹಂದಿ”ಗೆ ಹೋಲಿಸುವುದು ಅಮಾನವೀಯ. ನಾಗರಿಕ ಚರ್ಚೆಯ ಮೂಲಭೂತ ಮಾನದಂಡಗಳ ಬಗ್ಗೆ ಆಳವಾದ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ.ನಾನು ಸ್ಪಷ್ಟವಾಗಿ ಹೇಳುತ್ತೇನೆ, ಈ ಹಿಂದೆ ನಾನು ನೀಡಿದ ಯಾವ ಹೇಳಿಕೆಯೂ ಸ್ತ್ರೀ ದ್ವೇಷಿಯಾಗಿರಲಿಲ್ಲ. ಸಾರ್ವಜನಿಕ ಹೊಣೆಗಾರಿಕೆ ಮತ್ತು ವೈಯಕ್ತಿಕ ನಡವಳಿಕೆಯ ಪ್ರಶ್ನೆಗಳಾಗಿದ್ದವು. ಇದನ್ನು ಪ್ರತಿಯೊಬ್ಬ ಸಾರ್ವಜನಿಕ ವ್ಯಕ್ತಿ ಎದುರಿಸಲು ಸಿದ್ದರಾಗಿರಬೇಕು. ಪುರುಷ ಅಥವಾ ಮಹಿಳೆ ಯಾರೇ ಆಗಲಿ. ಸಂಗತಿಗಳು ಅನುಕೂಲ ಇದ್ದಾಗ ಸುಮ್ಮನಿರುವುದು, ಅನಾನೂಕೂಲ ಇದ್ದಾಗ ಕಾನೂನು ಬದ್ಧ ಟೀಕೆಗಳನ್ನು ಸ್ತ್ರೀದ್ವೇಷ ಎನ್ನಲಾಗಲ್ಲ. ಪುರುಷ ಸಹೋದ್ಯೋಗಿಯನ್ನು ‘ಲೈಂಗಿಕವಾಗಿ ನಿರಾಶೆಗೊಂಡ ಎಂದು ಹಣೆಪಟ್ಟಿ ಕಟ್ಟುವುದು ಧೈರ್ಯವಲ್ಲ, ಅದು ಸಂಪೂರ್ಣ ನಿಂದನೆ. ಒಬ್ಬ ಮಹಿಳೆ ವಿರುದ್ದ ಅಂತಹ ಭಾಷೆ ಬಳಸಿದ್ರೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಜೂನ್‌ನಲ್ಲಿ ಕೋಲ್ಕತ್ತಾ ಕಾನೂನು ಕಾಲೇಜಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಟಿಎಂಸಿ ವಿದ್ಯಾರ್ಥಿ ಘಟಕದ ಇಬ್ಬರು ಸದಸ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾದ ನಂತರ, ಇಬ್ಬರು ಸಂಸದರ ನಡುವೆ ವಾಗ್ವಾದ ನಡೆದಿದೆ.