ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಜೀವ ವಿಮಾ ನಿಗಮದ (LIC) ಹೂಡಿಕೆ ನಿರ್ಧಾರಗಳು ಬಾಹ್ಯ ಅಂಶಗಳಿಂದ ಪ್ರಭಾವಿತವಾಗಿವೆ ಎಂಬ ‘ವಾಷಿಂಗ್ಟನ್ ಪೋಸ್ಟ್’ ವರದಿ ಸುಳ್ಳಿನಿಂದ ಅಥವಾ ತಪ್ಪು ಮಾಹಿತಿ ಯಿಂದ ಕೂಡಿದೆ ಎಂದು ಎಲ್ಐಸಿ ಸ್ಪಷ್ಟಪಡಿಸಿದೆ.
ಈ ವಿಚಾರವಾಗಿ ಎಲ್ಐಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಎಲ್‌ಐಸಿಯ ಹೂಡಿಕೆ ನಿರ್ಧಾರಗಳು ಬಾಹ್ಯ ಅಂಶಗಳಿಂದ ಪ್ರಭಾವಿತವಾಗಿವೆ ಎಂದು ‘ವಾಷಿಂಗ್ಟನ್ ಪೋಸ್ಟ್’ ಮಾಡಿರುವ ಆರೋಪಗಳು ಸುಳ್ಳು, ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದವು. ವರದಿಯಲ್ಲಿ ಉಲ್ಲೇಖಿಸಿರುವಂತೆ, ಅದಾನಿ ಗ್ರೂಪ್ನಲ್ಲಿ ಹೂಡಿಕೆ ಮಾಡುವ ಸಂಬಂಧ ಎಲ್ಐಸಿ ಯಾವುದೇ ಮಾರ್ಗಸೂಚಿ ರೂಪಿಸಿಲ್ಲ. ದಾಖಲೆಗಳನ್ನೂ ಸಿದ್ಧಪಡಿಸಿಲ್ಲ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ವಿವರವಾದ ಪರಿಶೀಲನೆಯ ನಂತರವೇ, ಹೂಡಿಕೆ ನಿರ್ಧಾರಗಳನ್ನು ಎಲ್ಐಸಿ ಸ್ವತಂತ್ರವಾಗಿ ತೆಗೆದುಕೊಳ್ಳುತ್ತದೆ. ಮಂಡಳಿಯ ಅನುಮೋದಿತ ನೀತಿಗಳ ಪ್ರಕಾರವೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಂತಹ ನಿರ್ಧಾರಗಳಲ್ಲಿ ಹಣಕಾಸು ಸೇವೆಗಳ ಇಲಾಖೆ ಅಥವಾ ಯಾವುದೇ ಇತರ ಸಂಸ್ಥೆಯು ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ. ಇಂಥ ವಿಚಾರಗಳಲ್ಲಿ ಎಲ್‌ಐಸಿ ಅತ್ಯುನ್ನತ ಮಾನದಂಡಗಳನ್ನು ಹೊಂದಿದೆ ಮತ್ತು ಪಾಲಿಸುತ್ತಿದೆ. ಎಲ್ಲಾ ಹೂಡಿಕೆ ನಿರ್ಧಾರಗಳನ್ನು ಅಸ್ತಿತ್ವದಲ್ಲಿರುವ ನೀತಿಗಳು, ಕಾಯಿದೆಗಳಲ್ಲಿನ ನಿಬಂಧನೆಗಳು ಮತ್ತು ನಿಯಂತ್ರಕ ಮಾರ್ಗಸೂಚಿಗಳಿಗೆ ಅನುಸಾರವಾಗಿ ತೆಗೆದುಕೊಳ್ಳಲಾಗಿದೆ. ಎಲ್ಲಾ ಪಾಲುದಾರರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ವಾಷಿಂಗ್ಟನ್ ಪೋಸ್ಟ್’ ವರದಿಯಲ್ಲಿ ಉಲ್ಲೇಖಿಸಲಾದ ಅಂಶವು ಎಲ್‌ಐಸಿಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ಪೂರ್ವಾಗ್ರಹ ಹರಡುವ ಸಂಚಿನಿಂದ ಮಾಡಲಾಗಿದೆ. ಎಲ್‌ಐಸಿಯ ಖ್ಯಾತಿ, ವರ್ಚಸ್ಸು ಹಾಗೂ ಭಾರತದಲ್ಲಿನ ಬಲವಾದ ಹಣಕಾಸು ವಲಯದ ಅಡಿಪಾಯವನ್ನು ಹಾಳು ಮಾಡುವ ಹುನ್ನಾರದಿಂದ ಮಾಡಲಾಗಿದೆ ಎಂದು ತೋರುತ್ತಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಆರೋಪಿಸಿದೆ.
ಅದಾನಿ ಗ್ರೂಪ್ ಕೂಡ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಎಲ್‌ಐಸಿ ಹೂಡಿಕೆಗಳನ್ನು ನಿರ್ದೇಶಿಸುವಂಥ ಯಾವುದೇ ಯೋಜನೆಗಳಲ್ಲಿ ನಾವು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು ಅದಾನಿ ಗ್ರೂಪ್ ಷೇರುಗಳಲ್ಲಿ ಭಾರಿ ಹೂಡಿಕೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

