Friday, December 12, 2025

ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ರಾಜ್ಯ ಕಾರಾಗೃಹ ಇಲಾಖೆಯ ಮಹಾ ನಿರ್ದೇಶಕರು (ಡಿಜಿಪಿ) ಮತ್ತು ಮಹಾ ನಿರೀಕ್ಷಕರಾಗಿ (ಐಜಿಪಿ) ಅಧಿಕಾರ ವಹಿಸಿಕೊಂಡಿದ್ದಾರೆ.

ಇಂದು ಫ್ರೀಡಂ ಪಾರ್ಕ್ ಮುಂಭಾಗದಲ್ಲಿರುವ ಕಾರಾಗೃಹ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಅವರು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಡಿಜಿಪಿ ಅಲೋಕ್ ಕುಮಾರ್ ಅವರು, ಇಲಾಖೆಯ ಸುಧಾರಣೆಯೇ ತಮ್ಮ ಮುಖ್ಯ ಗುರಿ ಎಂದು ಸ್ಪಷ್ಟಪಡಿಸಿದರು.

ಅವರು ಮಾಧ್ಯಮಗಳಿಗೆ, “ಕಾರಾಗೃಹಗಳ ಸುಧಾರಣೆ ನಮ್ಮ ಪ್ರಮುಖ ಆದ್ಯತೆ. ಈ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ವಿಸ್ತೃತ ಸಮಾಲೋಚನೆ ನಡೆಸುತ್ತೇನೆ” ಎಂದು ತಿಳಿಸಿದರು. ರಾಜ್ಯದ ಹಲವು ಭಾಗಗಳಲ್ಲಿ ಸೇವೆ ಸಲ್ಲಿಸಿದ ತಮ್ಮ ಅನುಭವವನ್ನು ಹಂಚಿಕೊಂಡ ಅವರು, “ನಾನು ಈ ಹಿಂದೆ ಬೈಲಹೊಂಗಲ ಕಾರಾಗೃಹ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲೂ ಕೆಲಸ ಮಾಡಿದ್ದೇನೆ. ಆ ಅನುಭವದಿಂದ ಜೈಲುಗಳಲ್ಲಿರುವ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದೆ. ಈ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು” ಎಂಬ ಭರವಸೆ ನೀಡಿದರು.

ಇನ್ನು, ಈ ಮೊದಲು ಕಾರಾಗೃಹ ಇಲಾಖೆಯ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಬಿ. ದಯಾನಂದ್ ಅವರನ್ನು ರಾಜ್ಯ ಸರ್ಕಾರವು ಪೊಲೀಸ್​​ ತರಬೇತಿ ವಿಭಾಗದ ಹೆಚ್ಚುವರಿ ಮಹಾ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ.

error: Content is protected !!