ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತ ವಿರುದ್ಧ ಸುಂಕದ ಬೆದರಿಕೆ ಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತಿಗೆ ಕ್ಯಾರೇ ಅನ್ನದೆ ಭಾರತ ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ಮುಂದುವರೆಸಿದೆ. ಈ ಮಧ್ಯೆ ಭಾರತದ ಪರವಾಗಿ ಬ್ಯಾಟ್ ಬೀಸಿರುವ ರಷ್ಯಾ, ‘ಯಾವುದೇ ರಾಷ್ಟ್ರದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದು, ಸಾರ್ವಭೌಮ ರಾಷ್ಟ್ರದ ಹಕ್ಕು’ಎಂದು ಹೇಳಿದೆ.
ಈ ಕುರಿತು ಮಾತನಾಡಿರುವ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ‘ಸಾರ್ವಭೌಮ ರಾಷ್ಟ್ರಗಳು ತಮ್ಮದೇ ಆದ ವ್ಯಾಪಾರ ಪಾಲುದಾರರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿವೆ. ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ನಿರ್ಧಾರವನ್ನು ಪ್ರಶ್ನಿಸುವುದಕ್ಕೆ ಅಮೆರಿಕ ಯಾವ ನೈತಿಕತೆಯನ್ನೂ ಹೊಂದಿಲ್ಲ’ ಎಂದು ಗುಡುಗಿದ್ದಾರೆ.
ಭಾರತಕ್ಕೆ ಬೆದರಿಕೆ ಹಾಕುತ್ತಿರುವ ಅಮೆರಿಕದ ಹೇಳಿಕೆಗಳನ್ನು ನಾವು ಕಾನೂನುಬದ್ಧ ಎಂದು ಪರಿಗಣಿಸುವುದಿಲ್ಲ. ರಷ್ಯಾದೊಂದಿಗೆ ವ್ಯಾಪಾರ ಸಂಬಂಧ ಕಡಿತಗೊಳಿಸುವಂತೆ ಸಾರ್ವಭೌಮ ರಾಷ್ಟ್ರವಾದ ಭಾರತದ ಮೇಲೆ ಯಾರೂ ಒತ್ತಡ ಹೇರುವಂತಿಲ್ಲ ಎಂದು ಡಿಮಿಟ್ರಿ ಪೆಸ್ಕೋವ್ ಖಡಕ್ ಆಗಿ ಉತ್ತರ ನೀಡಿದ್ದಾರೆ.
ಸಾರ್ವಭೌಮ ರಾಷ್ಟ್ರಗಳು ವ್ಯಾಪಾರ ಮತ್ತು ಆರ್ಥಿಕ ಸಹಕಾರಕ್ಕಾಗಿ ತಮ್ಮದೇ ಆದ ವ್ಯಾಪಾರ ಪಾಲುದಾರರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿವೆ. ನಿರ್ದಿಷ್ಟ ದೇಶದ ಹಿತಾಸಕ್ತಿಗಳಲ್ಲಿ ವ್ಯಾಪಾರ ಮತ್ತು ಆರ್ಥಿಕ ಸಹಕಾರದ ರೂಪಗಳನ್ನು, ತಾವೇ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಈ ರಾಷ್ಟ್ರಗಳು ಹೊಂದಿರುತ್ತವೆ ಎಂದು ಹೇಳಿದ್ದಾರೆ.
ಭಾರತ ವಿರೋಧ:
ಈ ಮಧ್ಯೆ ಡೊನಾಲ್ಡ್ ಟ್ರಂಪ್ ಅವರ ಸುಂಕದ ಬೆದರಿಕೆಗಳನ್ನು ಅಸಮರ್ಥನೀಯ ಎಂದು ಕರೆದಿರುವ ಭಾರತ, ದೇಶದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದೆ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಸ್ಪಷ್ಟಪಡಿಸಿದೆ.