Wednesday, October 22, 2025

ರಾಜಕೀಯ ‘ಕ್ರಾಂತಿ’ ನಡುವೆ ಡಿಕೆಶಿ ‘ದೈವ ಕ್ರಾಂತಿ’: ರಾಯರ ಸನ್ನಿಧಿಯತ್ತ ಡಿಸಿಎಂ ಪಯಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ರಾಜಕೀಯ ವಲಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಜೋರಾಗಿರುವ ನಡುವೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧಾರ್ಮಿಕ ಯಾತ್ರೆಯ ಹಾದಿ ಹಿಡಿಯುತ್ತಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದ ನಡುವೆ ರಾಜಕೀಯ ಚಟುವಟಿಕೆಗಳಿಂದ ಸ್ವಲ್ಪ ವಿಶ್ರಾಂತಿ ಪಡೆದು, ಕುಟುಂಬ ಸಮೇತ ದೇವರ ದರ್ಶನ ಮತ್ತು ಪ್ರಾರ್ಥನೆಗಾಗಿ ರಾಯಚೂರಿನತ್ತ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾರೆ. ಈ ಧಾರ್ಮಿಕ ಪ್ರವಾಸದಲ್ಲಿ ಯಾವುದೇ ಸರ್ಕಾರಿ ಅಥವಾ ರಾಜಕೀಯ ಸಭೆಗಳನ್ನು ಆಯೋಜಿಸದೇ ಕೇವಲ ಪೂಜೆ ಮತ್ತು ಭಕ್ತಿಯಲ್ಲೇ ಸಮಯ ಕಳೆಯುವ ಉದ್ದೇಶವಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ನಾಳೆ ಬೆಳಿಗ್ಗೆ 8 ಗಂಟೆಗೆ ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿ ದರ್ಶನದಿಂದ ಡಿಕೆಶಿ ಅವರ ಯಾತ್ರೆ ಆರಂಭವಾಗಲಿದೆ. ಬಳಿಕ ಬೆಳಿಗ್ಗೆ 10ಕ್ಕೆ ರಾಯಚೂರು ತಾಲೂಕಿನ ಬಿಚ್ಚಾಲಿಯಲ್ಲಿರುವ ಶ್ರೀ ರಾಯರ ಏಕಾಶಿಲಾ ವೃಂದಾವನ ಮತ್ತು ಬಿಚ್ಚಾಲಮ್ಮ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಬೆಳಿಗ್ಗೆ 11ಕ್ಕೆ ಗಾಣಧಾಣ ಪಂಚಮುಖಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ಮಧ್ಯಾಹ್ನದ ವೇಳೆಗೆ ಅವರು ಪಂಚಮುಖಿಯಲ್ಲಿ ನಡೆಯಲಿರುವ ಬ್ಲಾಕ್ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಂಜೆ ವೇಳೆಗೆ ಮಂತ್ರಾಲಯದಲ್ಲಿ ಧ್ಯಾನ ಹಾಗೂ ಪ್ರಾರ್ಥನೆ ನಡೆಸಿ, ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

error: Content is protected !!