ಹೊಸ ದಿಗಂತ ವರದಿ, ರಾಯಚೂರು :
ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರಾದ ರಾಯಚೂರು ಜಿಲ್ಲೆಯ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮೂಲತಃ ಮೈಸೂರ ಜಿಲ್ಲೆಯವರಾದ ಹಿರಿಯ ಐಪಿಎಸ್ ಅಧಿಕಾರಿ ಕಲಬುರಗಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿರುವ ಡಿ.ಐ.ಜಿ. ಪುಟ್ಟಮಾದಯ್ಯ.ಎಂ ಸೇರಿದಂತೆ ಐವರಿಗೆ ಭಾರತದ ೭೭ನೇ ಗಣರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು ೨೦೨೬ನೇ ಸಾಲಿನ ಪೊಲೀಸ್ ಉತ್ಕೃಷ್ಟ ಸೇವಾ ಪದಕವನ್ನು ಘೋಷಿಸಿದೆ.
ಅಸಾಧಾರಣ ಧೈರ್ಯ, ವಿಶಿಷ್ಟ ಹಾಗೂ ನಿಷ್ಠಾವಂತ ಸೇವೆ, ದೀರ್ಘಕಾಲದ ಶ್ರೇಷ್ಠ ಕಾರ್ಯನಿರ್ವಹಣೆ ಮತ್ತು ಸಾರ್ವಜನಿಕ ಸೇವೆಗೆ ಸಲ್ಲಿಸಿದ ಮಹತ್ವದ ಕೊಡುಗೆಯನ್ನು ಗುರುತಿಸಿದ್ದರಿಂದ ಹಿರಿಯ ಐಪಿಎಸ್ ಅಧಿಕಾರಿ ಪುಟ್ಟಮಾದಯ್ಯ.ಎಂ ಅವರಿಗೆ ರಾಷ್ಟ್ರಪತಿ ಪದಕ ಪುರಸ್ಕಾರ ಲಭಿಸಿದೆ. ಈ ಗೌರವವನ್ನು ರಾಷ್ಟ್ರಪಪತಿಯವರಿಂದ ನೀಡಲಾಗುವ ಪೊಲೀಸ್ ಶ್ರೇಣಿಯ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದೆoದು ಪರಿಗಣಿಸಲಾಗುತ್ತದೆ.
ಪುಟ್ಟಮಾದಯ್ಯ.ಎಂ ಈ ಹಿಂದೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ಸೇವೆ ಸಲ್ಲಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ ನಿಯಂತ್ರಣ, ಸಾರ್ವಜನಿಕರೊಂದಿಗೆ ಸ್ನೇಹಪೂರ್ಣ ಪೊಲೀಸ್ ವ್ಯವಸ್ಥೆ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅವರ ಸೇವಾ ಅವಧಿಯಲ್ಲಿ ಜಿಲ್ಲೆಯಲ್ಲಿನ ಹಲವು ಸವಾಲಿನ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದರು.
ಪೊಲೀಸ್ ಇಲಾಖೆಯಲ್ಲಿ ತಮ್ಮ ಕಾರ್ಯಕ್ಷಮತೆ, ಶಿಸ್ತು, ಮಾನವೀಯ ನಿಲುವು ಹಾಗೂ ಜನಪರ ಸೇವೆಯಿಂದ ಗುರುತಿಸಿಕೊಂಡಿದ್ದ ಪುಟ್ಟಮಾದಯ್ಯ.ಎಂ ಸದ್ಯ ಡಿ.ಐ.ಜಿ ಹುದ್ದೆಯಲ್ಲಿ ಕಲಬುರಗಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ಹೊಸ ತಲೆಮಾರಿನ ಪೊಲೀಸ್ ಅಧಿಕಾರಿಗಳಿಗೆ ಶಿಸ್ತು, ಸೇವಾಭಾವನೆ ಮತ್ತು ವೃತ್ತಿಪರ ನೈಪುಣ್ಯ ಬೆಳೆಸುವಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.
ರಾಷ್ಟ್ರಪತಿ ಪದಕ ಘೋಷಣೆಯ ಸುದ್ದಿ ತಿಳಿಯುತ್ತಿದ್ದಂತೆ ಗಣ್ಯರು, ಸ್ನೇಹಿತರು, ಪೊಲೀಸ್ ಇಲಾಖೆಯ ಸಹೋದ್ಯೋಗಿಗಳು, ಸಿಬ್ಬಂದಿ ಹಾಗೂ ಕುಟುಂಬದವರಿoದ ಮತ್ತು ಸಾರ್ವಜನಿಕರಿಂದ ಅಭಿನಂದನೆಗಳು ಬರುತ್ತಿರುವುದು ಮತ್ತಷ್ಟು ಸ್ಫೂರ್ತಿದಾಯಕವಾಗಿದೆ ಎಂದು ಪುಟ್ಟಮಾದಯ್ಯ ಎಂ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.



