ಹೊಸದಿಗಂತ ವರದಿ ಮಂಗಳೂರು:
ಕಬ್ಬಿಣದ ರಾಡ್ ಎದೆಯೊಳಗೆ ಹೊಕ್ಕು ತೀರ ಗಂಭೀರ ಸ್ಥಿತಿಯಲ್ಲಿದ್ದ ಕಾಸರಗೋಡಿನ 11 ವರ್ಷದ ಬಾಲಕಿಯನ್ನು ರಕ್ಷಿಸುವಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ವೈದ್ಯರ ತಂಡ ಯಶಸ್ವಿಯಾಗಿದೆ.
ಜನವರಿ 18, 2026 ರಂದು ಬಾಲಕಿ ಶ್ರೀನಾ (ಹೆಸರು ಬದಲಾಯಿಸಲಾಗಿದೆ) ಆಟವಾಡುವಾಗ ಕಬ್ಬಿಣದ ರಾಡ್ ಮೇಲೆ ಆಕಸ್ಮಿಕವಾಗಿ ಬಿದ್ದಿದ್ದು, ರಾಡ್ ಬಾಲಕಿಯ ಎದೆಯ ಬಲಭಾಗದಲ್ಲಿ ಮುಂದಿನಿಂದ ಹೊಕ್ಕಿ ಹಿಂಬದಿಯಿಂದ ಹೊರಬಂದಿತ್ತು. ತಕ್ಷಣ ಪೋಷಕರು ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು.
ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ತಜ್ಞೆ ಡಾ. ಅರ್ಪಿತಾ ಮತ್ತು ಅವರ ತಂಡ ತಕ್ಷಣ ಬಾಲಕಿಯ ಸ್ಥಿತಿಯನ್ನು ಸ್ಥಿರಗೊಳಿಸಿ ಶಸ್ತ್ರಚಿಕಿತ್ಸೆ ಕೊಠಡಿಗೆ ಕಳುಹಿಸಿದರು.
ಹೇಗಿತ್ತು ಚಿಕಿತ್ಸೆ?
ಬಾಲಕಿಗೆ ಥೊರಾಕೊಟೊಮಿ ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ. ಸದಾಶಿವ್ ರಾವ್, ಅರವಳಿಕೆ ತಜ್ಞ ಡಾ. ಸುನೀಲ್ ಹಾಗೂ ಡಾ. ಫ್ರೀಡಾ ಕುಟಿನ್ಹಾ ಅವರೊಂದಿಗೆ ಸೇರಿ ಬಾಲಕಿಯ ಎದೆಗೆ ಹೊಕ್ಕಿದ್ದ ಕಬ್ಬಿಣದ ರಾಡ್ ಅನ್ನು ಸುರಕ್ಷಿತವಾಗಿ ಹೊರತೆಗೆದರು.
ಶಸ್ತ್ರಚಿಕಿತ್ಸೆಯ ಬಳಿಕ ಬಾಲಕಿಯನ್ನು ಪಿಡಿಯಾಟ್ರಿಕ್ ಇಂಟೆನ್ಸಿವ್ ಕೇರ್‌ಗೆ ವರ್ಗಾಯಿಸಿ ತೀವ್ರ ನಿಗಾದಲ್ಲಿರಿಸಲಾಯಿತು. ಡಾ. ಸ್ವಾತಿ ರಾವ್ (ಕನ್ಸಲ್ಟೆಂಟ್ – ಪಿಡಿಯಾಟ್ರಿಕ್ ಇಂಟೆನ್ಸಿವಿಸ್ಟ್) ಅವರ ಆರೈಕೆಯಲ್ಲಿ ಬಾಲಕಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬೇಗ ಚೇತರಿಸಿಕೊಂಡಿದ್ದಾಳೆ.
ಚಿಕಿತ್ಸೆ ಕುರಿತು ಮಾತನಾಡಿದ ಡಾ. ಸದಾಶಿವ್ ರಾವ್, “ಮಕ್ಕಳಲ್ಲಿ ಎದೆಯೊಳಗೆ ಇಂತಹ ವಸ್ತುಗಳು ಹೊಕ್ಕುವ ಘಟನೆಗಳು ಅಪರೂಪವಾದರೂ ಅತ್ಯಂತ ಜೀವಾಪಾಯಕಾರಿ. ಚಾಕು, ರಾಡ್‌ನಂತಹ ವಸ್ತುಗಳು ಎದೆಯೊಳಗೆ ಹೊಕ್ಕಿದ್ದಲ್ಲಿ, ಅವುಗಳನ್ನು ಸಂಪೂರ್ಣ ಸೌಲಭ್ಯಗಳಿರುವ ತಜ್ಞ ಆಸ್ಪತ್ರೆಯಲ್ಲೇ ಮಾತ್ರ ಹೊರತೆಗೆದಬೇಕು. ಈ ಪ್ರಕರಣದಲ್ಲಿ ರಾಡ್ ತೆಗೆಯುವ ಮೊದಲು ಹೆಚ್ಚುವರಿ ಭಾಗವನ್ನು ತುಂಡರಿಸುವುದು ಅಗತ್ಯವಿತ್ತು” ಎಂದರು.
ಒಂದು ವಾರದೊಳಗೆ ಬಾಲಕಿ ಶ್ರೀನಾ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾಳೆ.
ಕೆಎಂಸಿ ಆಸ್ಪತ್ರೆಯ ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, “ಈ ಪ್ರಕರಣವು ಕೆಎಂಸಿ ಆಸ್ಪತ್ರೆ ಮಂಗಳೂರು ಮಕ್ಕಳ ತುರ್ತು ಆರೈಕೆ ಘಟಕದ ಬದ್ಧತೆಯನ್ನು ತೋರಿಸುತ್ತದೆ. ಆಧುನಿಕ ಸೌಲಭ್ಯಗಳು, ಪರಿಣತ ವೈದ್ಯರ ತಂಡ ಮತ್ತು ಸುಸಜ್ಜಿತ ಮಕ್ಕಳ ತೀವ್ರ ಆರೈಕೆ ಘಟಕವನ್ನು ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೇ ಕೆಎಂಸಿ” ಎಂದು ಹೇಳಿದರು. ಜೊತೆಗೆ, ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಿ ಬಾಲಕಿಯ ಸ್ಥಿತಿ ಸ್ಥಿರಗೊಳಿಸಿದ ಸ್ಥಳೀಯ ಆರೋಗ್ಯ ಕೇಂದ್ರದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು.
ಮಣಿಪಾಲ್ ಆಸ್ಪತ್ರೆಗಳ ಬಗ್ಗೆ
ಆರೋಗ್ಯ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಮಣಿಪಾಲ್ ಆಸ್ಪತ್ರೆಗಳು ವಾರ್ಷಿಕವಾಗಿ 8 ಮಿಲಿಯನ್‌ಗಿಂತ ಹೆಚ್ಚು ರೋಗಿಗಳಿಗೆ ಸೇವೆ ನೀಡುತ್ತಿವೆ. ಕೈಗೆಟುಕುವ, ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಗುರಿಯೊಂದಿಗೆ ಇಂದು 24 ನಗರಗಳಲ್ಲಿ 49 ಆಸ್ಪತ್ರೆಗಳ ಜಾಲ, 12,600 ಪರವಾನಗಿ ಪಡೆದ ಹಾಸಿಗೆಗಳು, 11,000ಕ್ಕೂ ಹೆಚ್ಚು ವೈದ್ಯರು ಹಾಗೂ 34,000ಕ್ಕೂ ಅಧಿಕ ಸಿಬ್ಬಂದಿಯನ್ನು ಹೊಂದಿದೆ.
ಮಣಿಪಾಲ್ ಆಸ್ಪತ್ರೆಗಳು AAHRPP ಮಾನ್ಯತೆ ಪಡೆದಿದ್ದು, ಅದರ ಹೆಚ್ಚಿನ ಆಸ್ಪತ್ರೆಗಳು NABH, NABL, ER ಮತ್ತು ರಕ್ತ ಬ್ಯಾಂಕ್ ಮಾನ್ಯತೆ ಹೊಂದಿವೆ.



