ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿ ಮತ್ತು ನಂಬಿಕೆಯ ಮೇಲೆ ಆರಂಭವಾದ ಸಂಬಂಧ ಪೊಲೀಸ್ ಠಾಣೆ ತಲುಪುತ್ತಿದ್ದಂತೆಯೇ ತಿರುವು ಪಡೆದುಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಪ್ರಿಯಕರನ ಹಳೆಯ ಕೃತ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದಂತೆ, ಯುವತಿಯೊಬ್ಬಳು ಆತ ಕಟ್ಟಿದ್ದ ತಾಳಿಯನ್ನೇ ಬಿಸಾಕಿ ಪೋಷಕರೊಂದಿಗೆ ಮನೆಗೆ ಮರಳಿದ ಘಟನೆ ಅಚ್ಚರಿ ಮೂಡಿಸಿದೆ.
ನಗರದ ಗಂಗನಮಿದ್ದೆ ಬಡಾವಣೆಯ ನಿವಾಸಿ, ಪೇಂಟ್ ಕೆಲಸ ಮಾಡುತ್ತಿದ್ದ ಸಂದೀಪ್ ಎಂಬ ವ್ಯಕ್ತಿ, ಕಂದವಾರ ಬಡಾವಣೆಯ 18 ವರ್ಷದ ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿದ್ದ. ಎರಡು ದಿನಗಳ ಹಿಂದೆ ಯುವತಿಯನ್ನು ಕರೆದುಕೊಂಡು ಹೋಗಿದ್ದ ಆತ, ಚಿಂತಾಮಣಿ ತಾಲೂಕಿನ ದೇವಸ್ಥಾನವೊಂದರಲ್ಲಿ ಆಕೆಗೆ ತಾಳಿ ಕಟ್ಟಿದ್ದಾನೆ ಎನ್ನಲಾಗಿದೆ. ಬಳಿಕ ಇಬ್ಬರೂ ಕಾರಿನಲ್ಲಿ ಚಿಕ್ಕಬಳ್ಳಾಪುರ ಕಡೆ ಬರುತ್ತಿದ್ದಾಗ ಶಿಡ್ಲಘಟ್ಟದಲ್ಲಿ ಯುವತಿಯ ಪೋಷಕರು ಕಾರನ್ನು ತಡೆದಿದ್ದಾರೆ.
ಇದನ್ನೂ ಓದಿ: FOOD | ಮೆದುಳಿಗೆ ಶಕ್ತಿ ಕೊಡುವ ಸಾಂಪ್ರದಾಯಿಕ ರುಚಿಯ ಬ್ರಾಹ್ಮಿ ಚಟ್ನಿ: ರೆಸಿಪಿ ಇಲ್ಲಿದೆ
ಪೋಷಕರು ಇಬ್ಬರನ್ನೂ ನೇರವಾಗಿ ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು. ಅಲ್ಲಿ ಜೋಡಿ ತಾವು ಮದುವೆಯಾಗಿದ್ದು, ತಮ್ಮ ಜೀವನವನ್ನು ನಡೆಸಲು ಅವಕಾಶ ನೀಡುವಂತೆ ಪೊಲೀಸರ ಮುಂದೆ ಮನವಿ ಮಾಡಿಕೊಂಡರು. ಆದರೆ ವಿಚಾರಣೆ ನಡೆಯುತ್ತಿದ್ದಂತೆಯೇ ಸಂದೀಪ್‌ನ ಹಳೆಯ ಪ್ರೇಮ ಪ್ರಕರಣಗಳು ಒಂದೊಂದಾಗಿ ಹೊರಬಿದ್ದವು.
ಈತನ ವಿರುದ್ಧ 2024ರಲ್ಲಿ ಅಪ್ರಾಪ್ತ ಬಾಲಕಿಗೆ ಸಂಬಂಧಿಸಿದ ಪ್ರಕರಣ, ಮತ್ತೊಬ್ಬ ಮಹಿಳೆಗೆ ವಂಚನೆ ಆರೋಪ ಮತ್ತು ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣಗಳ ಮಾಹಿತಿ ಪೊಲೀಸರ ಮುಂದೆ ಬಂದಿದೆ. ಹಿಂದಿನ ಪ್ರಕರಣದ ಬಾಧಿತೆಯೇ ಠಾಣೆಗೆ ಆಗಮಿಸಿ ಆರೋಪಿಯ ವರ್ತನೆಯ ಬಗ್ಗೆ ವಿವರ ನೀಡಿದ್ದಾಳೆ.
ಈ ಎಲ್ಲಾ ವಿಚಾರಗಳು ತಿಳಿಯುತ್ತಿದ್ದಂತೆ ಯುವತಿ ಆಘಾತಗೊಂಡು, ಪ್ರಿಯಕರನೊಂದಿಗೆ ಮುಂದಿನ ಜೀವನ ಅಸಾಧ್ಯ ಎಂದು ತೀರ್ಮಾನಿಸಿ ತಾಳಿ ತೆಗೆದು ಹಾಕಿ ಪೋಷಕರೊಂದಿಗೆ ಮನೆಗೆ ತೆರಳಿದ್ದಾಳೆ.

