ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ ವೇಳೆ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಇಬ್ಬರು ಆಟಗಾರ್ತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಇಂದೋರ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ, ಆಸ್ಟ್ರೇಲಿಯಾ ಮಹಿಳಾ ತಂಡವು ತಮ್ಮ ಕೊನೆಯ ಲೀಗ್ ಪಂದ್ಯಕ್ಕಾಗಿ ಇಂದೋರ್‌ನ ಹೊಳ್ಕರ್ ಮೈದಾನದಲ್ಲಿ ಆಡಲು ಸಿದ್ಧವಾಗಿದ್ದು, ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಿತ್ತು. ಗುರುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಇಬ್ಬರು ಆಟಗಾರ್ತಿಯರು ಹೋಟೆಲ್‌ನಿಂದ ಕೆಫೆಗೆ ನಡೆದುಕೊಂಡು ಹೋಗುತ್ತಿದ್ದಾಗ ಖಜ್ರಾನಾ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬನು ಅವರನ್ನು ಕೀಟಲೆ ಮಾಡಿದ್ದಲ್ಲದೆ, ಅನುಚಿತವಾಗಿ ವರ್ತಿಸಿದ್ದಾನೆ.
ಘಟನೆಯಿಂದ ಆತಂಕಗೊಂಡ ಆಟಗಾರ್ತಿಯರು ತಕ್ಷಣವೇ ತಂಡದ ಭದ್ರತಾ ಅಧಿಕಾರಿ ಡ್ಯಾನಿ ಸಿಮನ್ಸ್ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ MIG ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ದಾರಿಹೋಕರೊಬ್ಬರು ಶಂಕಿತನ ಬೈಕ್ ಸಂಖ್ಯೆಯನ್ನು ದಾಖಲಿಸಿದ್ದರಿಂದ ಪೊಲೀಸರು ಆರೋಪಿ ಅಕೀಲ್ ಖಾನ್‌ನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ ಹಿಮಾನಿ ಮಿಶ್ರಾ ತಿಳಿಸಿದ್ದಾರೆ.
ಘಟನೆಯ ನಂತರ ಆಸ್ಟ್ರೇಲಿಯಾ ಮಹಿಳಾ ತಂಡದ ಭದ್ರತೆಯನ್ನು ಬಲಪಡಿಸಲಾಗಿದ್ದು, ಮುಂದಿನ ಪಂದ್ಯಾವಳಿಗಳ ವೇಳೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

