ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿರುವ ನಟ ಹಾಗೂ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಇಂದು ಉಡುಪಿಗೆ ಆಗಮಿಸುತ್ತಿದ್ದಾರೆ. ಪವಿತ್ರ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಲಕ್ಷಕಂಠ ಗೀತಾ ಪಾರಾಯಣದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಈ ಪ್ರವಾಸ ಕೈಗೊಂಡಿದ್ದಾರೆ.
ಮಧ್ಯಾಹ್ನ 2:30ರ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪವನ್ ಕಲ್ಯಾಣ್, ಅಲ್ಲಿಂದ ಉಡುಪಿ ಪ್ರವಾಸಿ ಮಂದಿರಕ್ಕೆ ತೆರಳಲಿದ್ದಾರೆ. ನಂತರ ಸಂಜೆ 4 ಗಂಟೆಯ ಸುಮಾರಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ಮಠದ ರಾಜಾಂಗಣದಲ್ಲಿ ನಡೆಯಲಿರುವ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ಗೀತೋತ್ಸವವನ್ನು ಪರ್ಯಾಯ ಶ್ರೀ ಪುತ್ತಿಗೆ ಮಠ ಆಯೋಜಿಸಿದ್ದು, ಕಳೆದ ತಿಂಗಳ 8ರಂದು ಪೇಜಾವರ ಶ್ರೀಗಳ ಸಾನ್ನಿಧ್ಯದಲ್ಲಿ ಉದ್ಘಾಟನೆಗೊಂಡಿತ್ತು. ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಭಾಗವಹಿಸಿದ್ದು, ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ.
ಉಡುಪಿ ಪ್ರವಾಸದ ಬಳಿಕ ಪವನ್ ಕಲ್ಯಾಣ್ ಇಂದು ರಾತ್ರಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಾಪಸ್ಸಾಗಲಿದ್ದಾರೆ. ಅವರ ಭೇಟಿ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠ ಹಾಗೂ ನಗರದಲ್ಲಿ ಭಕ್ತರು ಮತ್ತು ಅಭಿಮಾನಿಗಳಲ್ಲಿ ವಿಶೇಷ ನಿರೀಕ್ಷೆ ಮತ್ತು ಉತ್ಸಾಹ ಕಂಡುಬರುತ್ತಿದೆ.

