ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣ್ಯಕ್ಷೇತ್ರವೆಂದೇ ಪ್ರಸಿದ್ಧಿ ಪಡೆದ ಧರ್ಮಸ್ಥಳ ಇತ್ತೀಚೆಗೆ ಹಲವು ವಿವಾದಗಳಿಂದ ಸುದ್ದಿಯಲ್ಲಿದೆ. ಕ್ಷೇತ್ರದ ಘನತೆಯನ್ನು ಹಾಳು ಮಾಡುವ ಉದ್ದೇಶದಿಂದ ಅಪಪ್ರಚಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ನಡೆಸಿದ್ದ ಚಿನ್ನಯ್ಯ ಎಂಬಾತನನ್ನು ಈಗಾಗಲೇ ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ನೆರೆಯ ರಾಜ್ಯ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ಅವರು ಧರ್ಮಸ್ಥಳಕ್ಕೆ ಆಗಮಿಸಲು ಸಿದ್ಧರಾಗಿದ್ದಾರೆ.
ಸೆಪ್ಟೆಂಬರ್ 11 ರಂದು ಸಂಜೆ ಐದು ಗಂಟೆಗೆ ಪವನ್ ಕಲ್ಯಾಣ್ ಧರ್ಮಸ್ಥಳಕ್ಕೆ ಆಗಮಿಸಲಿದ್ದು, ದೇವಾಲಯದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ. ಅಲ್ಲದೇ ಆರತಿ ಸೇವೆಯಲ್ಲಿ ಭಾಗವಹಿಸುವ ಜೊತೆಗೆ ಧರ್ಮಾಧಿಕಾರಿಗಳನ್ನು ಭೇಟಿಯಾಗಿ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಪವನ್ ಕಲ್ಯಾಣ್ ಅವರು ಜನಸೇನಾ ಪಕ್ಷದ ಸ್ಥಾಪಕರಾಗಿದ್ದು, ಪ್ರಸ್ತುತ ಟಿಡಿಪಿ ಮತ್ತು ಬಿಜೆಪಿ ಜೊತೆ ಮೈತ್ರಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದಿನಿಂದಲೂ ಹಿಂದುಪರ ನಿಲುವುಗಳನ್ನು ತಾಳಿಕೊಂಡಿರುವ ಅವರು, ತಿರುಪತಿ ಪ್ರಸಾದದಲ್ಲಿ ದನದ ಕೊಬ್ಬು ಪತ್ತೆಯಾದಾಗ ತಿರುಪತಿಗೆ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದನ್ನು ನೆನಪಿಸಿಕೊಳ್ಳಬಹುದು.
ಧರ್ಮಸ್ಥಳದ ವಿರುದ್ಧ ಹೊರಬಿದ್ದ ಆರೋಪಗಳು ಕ್ರಮೇಣ ಕುಸಿಯುತ್ತಿದ್ದು, ಇದು ಯೋಜಿತ ಷಡ್ಯಂತ್ರವಾಗಿದ್ದೇ ಎಂಬ ಅನುಮಾನಗಳು ಗಟ್ಟಿಯಾಗುತ್ತಿವೆ. ಇಂತಹ ಸಮಯದಲ್ಲಿ ಪವನ್ ಕಲ್ಯಾಣ್ ಅವರ ಭೇಟಿ ಧರ್ಮಸ್ಥಳದ ಪರವಾಗಿ ಶಕ್ತಿಯುತ ಸಂದೇಶ ನೀಡಲಿದೆ ಎಂಬ ನಿರೀಕ್ಷೆಯಿದೆ. ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕಾರಣಿಗಳು ಸಹ ಧರ್ಮಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದರು.