Wednesday, October 22, 2025

‘ವಿದ್ಯುತ್ ಕಡಿತ’ದ ಕರ್ನಾಟಕಕ್ಕೆ ಆಂಧ್ರ ಐಟಿ ಸಚಿವ ನಾರಾ ಲೋಕೇಶ್ ಕ್ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಅವರು, ತಮ್ಮ ರಾಜ್ಯದಲ್ಲಿ ಗೂಗಲ್ ಎಐ ಕೇಂದ್ರವನ್ನು ಸ್ಥಾಪಿಸಲು ಸಹಿ ಹಾಕಿದ ಒಪ್ಪಂದವನ್ನು ಪ್ರಶ್ನಿಸಿದ ಕರ್ನಾಟಕದ ನಾಯಕರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಕರ್ನಾಟಕದ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಮೂಲಸೌಕರ್ಯ ಕೆಟ್ಟದಾಗಿದೆ ಮತ್ತು ವಿದ್ಯುತ್ ಕಡಿತವಿದೆ ಎಂದು ಹೇಳುತ್ತಿರುವುದನ್ನು ಉಲ್ಲೇಖಿಸಿದ ಲೋಕೇಶ್, ಕರ್ನಾಟಕವು ಮೊದಲು ಆ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಒತ್ತಿ ಹೇಳಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಂಪನಿಗಳನ್ನು ತಮ್ಮತ್ತ ಸೆಳೆಯಲು ಅವರು (ಕರ್ನಾಟಕದ ನಾಯಕರು) ಅಸಮರ್ಥರಾಗಿದ್ದರೆ ನಾನು ಏನು ಮಾಡಲು ಸಾಧ್ಯವಿಲ್ಲ,” ಎಂದರು. ಗೂಗಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಒಂದು ದಿನದ ಮೊದಲು ಕೂಡ ಹಲವು ರಾಜ್ಯಗಳು ಆ ಕಂಪನಿಯನ್ನು ತಮ್ಮ ರಾಜ್ಯಕ್ಕೆ ಬರುವಂತೆ ಪ್ರಯತ್ನಿಸಿದ್ದವು ಎಂದು ಲೋಕೇಶ್ ಮಾಹಿತಿ ನೀಡಿದರು.

ಪ್ರೋತ್ಸಾಹವೇ ಯಶಸ್ಸಿನ ಮಂತ್ರ
“ನಾವು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತೇವೆ. ವಿಶಾಖಪಟ್ಟಣದಲ್ಲಿ ಗೂಗಲ್ ಕೇಂದ್ರ ತೆರೆಯಲು ನಾವು ಹಲವಾರು ಸಭೆಗಳನ್ನು ನಡೆಸಿದ್ದೇವೆ ಮತ್ತು ಎದುರಾದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಟ್ಟಿದ್ದೇವೆ,” ಎಂದು ಆಂಧ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಅವರು ವಿವರಿಸಿದರು.

ರಾಜ್ಯ-ರಾಜ್ಯಗಳ ನಡುವೆ ಈ ರೀತಿಯ ಸ್ಪರ್ಧೆ ಇರಬೇಕು. ಈ ಸ್ಪರ್ಧೆಯಿಂದಾಗಿ ಅಂತಿಮವಾಗಿ ಲಾಭವಾಗುವುದು ಭಾರತಕ್ಕೇ ಎಂದು ಲೋಕೇಶ್ ಪ್ರತಿಪಾದಿಸಿದರು.

ಕಂಪ್ಯೂಟರ್ ಕ್ರಾಂತಿಯ ಸಂದರ್ಭದಲ್ಲಿ ಹಲವು ಮಂದಿ “ಕಂಪ್ಯೂಟರ್ ಆಹಾರ ನೀಡುತ್ತಾ?” ಎಂದು ಪ್ರಶ್ನಿಸಿದ್ದರು. ಆದರೆ, ಆಗಿನ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರು ಕಂಪನಿಗಳಿಗೆ ಪ್ರೋತ್ಸಾಹ ನೀಡಿದ್ದರಿಂದಲೇ ಹೈದರಾಬಾದ್ ಇಂದು ಟೆಕ್ ಸಿಟಿಯಾಗಿ ಬೆಳೆದು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ ಎಂದು ಹೇಳುವ ಮೂಲಕ ತಮ್ಮ ತಂದೆಯ ಸಾಧನೆಯನ್ನು ಮತ್ತು ದೂರದೃಷ್ಟಿಯನ್ನು ಸ್ಮರಿಸಿದರು.

error: Content is protected !!