ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಗ್ರೂಪ್‌ನ ಮುಖ್ಯಸ್ಥ ಅನಿಲ್ ಅಂಬಾನಿ ಒಡೆತನದ ಸಮೂಹ ಸಂಸ್ಥೆಗಳ ವಿರುದ್ಧ ಕೇಳಿ ಬಂದಿದ್ದ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆಯ ಭಾಗವಾಗಿ, ಜಾರಿ ನಿರ್ದೇಶನಾಲಯವು ಮಹತ್ವದ ಕ್ರಮ ಕೈಗೊಂಡಿದೆ. ಸುಮಾರು 3,084 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಇ.ಡಿ. ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಇ.ಡಿ.ಯು ಈ ಆಸ್ತಿಗಳನ್ನು ವಶಪಡಿಸಿಕೊಳ್ಳಲು ನಾಲ್ಕು ತಾತ್ಕಾಲಿಕ ಆದೇಶಗಳನ್ನು ಹೊರಡಿಸಿದೆ. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಪಟ್ಟಿಯಲ್ಲಿ ಅನಿಲ್ ಅಂಬಾನಿಯವರ ಮುಂಬೈನ ಪ್ರಖ್ಯಾತ ಪಾಲಿ ಹಿಲ್‌ನಲ್ಲಿರುವ ನಿವಾಸ, ಜೊತೆಗೆ ಅವರ ಸಮೂಹ ಸಂಸ್ಥೆಗಳಿಗೆ ಸಂಬಂಧಿಸಿದ ಹಲವು ವಸತಿ ಮತ್ತು ವಾಣಿಜ್ಯ ಆಸ್ತಿಗಳು ಸೇರಿವೆ.
ಪ್ರಮುಖವಾಗಿ ಮುಟ್ಟುಗೋಲು ಹಾಕಿದ ಆಸ್ತಿಗಳು:
ಮುಂಬೈನ ಪಾಲಿ ಹಿಲ್‌ನಲ್ಲಿರುವ ಅನಿಲ್ ಅಂಬಾನಿಯ ನಿವಾಸ.
ದೆಹಲಿಯ ಮಹಾರಾಜ ರಂಜಿತ್ ಸಿಂಗ್ ಮಾರ್ಗದಲ್ಲಿರುವ ರಿಲಯನ್ಸ್ ಸೆಂಟರ್‌ಗೆ ಸೇರಿದ ಜಮೀನು.
ದಿಲ್ಲಿ, ನೋಯ್ಡಾ, ಘಾಝಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ ಹಾಗೂ ಪೂರ್ವ ಗೋದಾವರಿ ನಗರಗಳಲ್ಲಿರುವ ಇತರೆ ಆಸ್ತಿಪಾಸ್ತಿಗಳು.
ಪ್ರಕರಣದ ಹಿನ್ನೆಲೆ:
2017 ಮತ್ತು 2019ರ ನಡುವಿನ ಅವಧಿಯಲ್ಲಿ, ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಅಡಿಯಲ್ಲಿರುವ ಸಂಸ್ಥೆಗಳಿಗೆ ಯೆಸ್ ಬ್ಯಾಂಕ್ ಸುಮಾರು 3,000 ಕೋಟಿ ಸಾಲ ನೀಡಿತ್ತು. ಆದರೆ, ಈ ಸಾಲದ ಹಣವನ್ನು ಕಾನೂನುಬಾಹಿರವಾಗಿ ಗ್ರೂಪ್‌ನ ಇತರ ಶೆಲ್ ಕಂಪನಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಇ.ಡಿ. ಆರೋಪಿಸಿದೆ. ಈ ರೀತಿ ಮಾಡುವುದರಿಂದ ಬ್ಯಾಂಕ್‌ಗಳು, ಷೇರುದಾರರು, ಹೂಡಿಕೆದಾರರು ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳಿಗೆ ವಂಚನೆ ಮಾಡಿ, ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಇ.ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿದೆ.

