ಹೊಸದಿಗಂತ ಹಾವೇರಿ:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ಗ್ರಾಮೀಣ ಪ್ರದೇಶಗಳಿಂದ ಸಂಗ್ರಹಿಸಿ, ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸಲು ಸಿದ್ಧತೆ ನಡೆಸಿದ್ದ ಬೃಹತ್ ಜಾಲವನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಭೇದಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಈ ಕಾರ್ಯಚರಣೆ ನಡೆದಿದೆ. ಅಧಿಕಾರಿಗಳು ಒಟ್ಟು 545 ಚೀಲಗಳಲ್ಲಿ ತುಂಬಿದ್ದ ಅನ್ನಭಾಗ್ಯ ಅಕ್ಕಿಯ ಭಾರೀ ದಾಸ್ತಾನನ್ನು ಹಾಗೂ ಅದನ್ನು ಸಾಗಿಸಲು ಸಿದ್ಧವಾಗಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಕಾಪುರ ನಗರದ ಹೊರವಲಯದಲ್ಲಿರುವ ಹಾನಗಲ್ ರಸ್ತೆಯಲ್ಲಿರುವ ಹತ್ತಿ ಜೀನ್ ಒಂದರಲ್ಲಿ ಅಕ್ರಮವಾಗಿ ಈ ಅಕ್ಕಿಯನ್ನು ಸಂಗ್ರಹಿಸಿಡಲಾಗಿತ್ತು. ಈ ದಂಧೆಯಲ್ಲಿ ತೊಡಗಿದ್ದವರು ಹಳ್ಳಿಗಳ ಜನರಿಂದ ಅಂಗಡಿಗಳ ಮೂಲಕ ಕಡಿಮೆ ಬೆಲೆಗೆ ಅಕ್ಕಿಯನ್ನು ಸಂಗ್ರಹಿಸಿ, ಇದೇ ಹತ್ತಿ ಜೀನ್‌ನಲ್ಲಿ ಅಕ್ಕಿ ಪಾಲೀಶ್ ಮಾಡುವ ಯಂತ್ರಗಳ ಮೂಲಕ ಅದನ್ನು ಉತ್ತಮ ಗುಣಮಟ್ಟದ ಅಕ್ಕಿಯಂತೆ ಪರಿವರ್ತಿಸುತ್ತಿದ್ದರು. ನಂತರ, ರಾತ್ರೋರಾತ್ರಿ ಅದನ್ನು ಹೊರರಾಜ್ಯಗಳಾದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ರವಾನಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಅಕ್ರಮ ಸಾಗಾಟದ ಹಿಂದೆ ಸ್ಥಳೀಯರಾದ ಮೈನುದ್ದೀನ್ ಮತ್ತು ಸೈಯದ್ ಶಬ್ಬೀರ್ ಅಹ್ಮದ್ ಎಂಬುವರು ಇದ್ದಾರೆ ಎಂದು ಆರೋಪಿಸಲಾಗಿದೆ.
ಶಿಗ್ಗಾಂವಿ ತಹಶೀಲ್ದಾರ್ ಮತ್ತು ಆಹಾರ ನಿರೀಕ್ಷಕರ ನೇತೃತ್ವದಲ್ಲಿ ನಡೆದ ಈ ದಿಢೀರ್ ಕಾರ್ಯಾಚರಣೆಯಲ್ಲಿ, ಮಹಾರಾಷ್ಟ್ರಕ್ಕೆ ಸಾಗಿಸಲು ಲಾರಿಯಲ್ಲಿ ತುಂಬಿಸಿ ಸಿದ್ಧಪಡಿಸಿದ್ದ ಅಕ್ಕಿಯ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಸಾಗಾಟದ ಸಂಪೂರ್ಣ ಜಾಲದ ಕುರಿತು ತನಿಖೆ ಮುಂದುವರೆದಿದೆ. ಬಡವರ ಪಾಲಿನ ಅಕ್ಕಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

