ಹೊಸದಿಗಂತ ಡಿಜಿಟಲ್ ಡೆಸ್ಕ್;
ಕಾಂಗ್ರೆಸ್ ಪಾಳೆಯದಲ್ಲಿ ರೆಬೆಲ್ ಸಂಸದ ಎಂದೇ ಗುರುತಿಸಿಕೊಂಡಿರುವ ಶಶಿ ತರೂರ್ ಅವರಿಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಪ್ರಶಸ್ತಿ ಘೋಷಿಸಲಾಗಿದೆ. ಇದಕ್ಕೆ, ಪಕ್ಷದಲ್ಲಿ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಪ್ರಶಸ್ತಿ ಸ್ವೀಕರಿಸಲು ಅವರು ನಿರಾಕರಿಸಿದ್ದಾರೆ.
ಹೈರೇಂಜ್ ಗ್ರಾಮೀಣಾಭಿವೃದ್ಧಿ ಸೊಸೈಟಿಯು (HRDS) ಸಾವರ್ಕರ್ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತದೆ. ಈ ವರ್ಷದ ಪ್ರಶಸ್ತಿಯನ್ನು ಶಶಿ ತರೂರ್ ಅವರಿಗೆ ಘೋಷಿಸಲಾಗಿತ್ತು. ಆದರೆ, ಪ್ರಶಸ್ತಿ ಪ್ರಕಟಕ್ಕೂ ಮೊದಲು ನನ್ನನ್ನು ಸಂಪರ್ಕಿಸಿಲ್ಲ. ಕಾರ್ಯಕ್ರಮದ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಹೀಗಾಗಿ, ಪ್ರಶಸ್ತಿ ಸ್ವೀಕರಿಸುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ಸಂಸದ ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಶಶಿ ತರೂರ್ ಅವರು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಹಾಕಲು ಕೇರಳಕ್ಕೆ ತೆರಳಿದಾಗ, ನನಗೆ ಸಾವರ್ಕರ್ ಪ್ರಶಸ್ತಿ ಪ್ರಕಟವಾದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಇಂಥದ್ದೊಂದು ಪ್ರಶಸ್ತಿ ನೀಡಲಾಗುತ್ತದೆ ಎಂಬುದೇ ನನಗೆ ಗೊತ್ತಿಲ್ಲ. ಘೋಷಣೆಗೂ ಮೊದಲು ನನ್ನನ್ನು ಸಂಪರ್ಕಿಸಿಲ್ಲ. ಹೀಗಾಗಿ ಪ್ರಶಸ್ತಿ ಸ್ವೀಕರಿಸಲು ಸಮಾರಂಭಕ್ಕೆ ತೆರಳುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲೂ ಪೋಸ್ಟ್ ಹಂಚಿಕೊಂಡಿರುವ ಹಿರಿಯ ಕಾಂಗ್ರೆಸ್ಸಿಗ, ‘ಪ್ರಶಸ್ತಿಯ ಸ್ವರೂಪ, ಅದನ್ನು ನೀಡುವ ಸಂಸ್ಥೆ ಹಾಗೂ ಇತರ ಯಾವುದೇ ಮಾಹಿತಿ ನನಗೆ ತಿಳಿದಿಲ್ಲ. ಹೀಗಾಗಿ, ನಾನು ಕಾರ್ಯಕ್ರಮಕ್ಕೆ ಹಾಜರಾಗುವ ಅಥವಾ ಪ್ರಶಸ್ತಿಯನ್ನು ಸ್ವೀಕರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಶಶಿ ತರೂರ್ ಅವರು ಪ್ರಶಸ್ತಿ ನಿರಾಕರಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಹೈರೇಂಜ್ ಗ್ರಾಮೀಣಾಭಿವೃದ್ಧಿ ಸೊಸೈಟಿಯ (HRDS) ಕಾರ್ಯದರ್ಶಿ ಅಜಿ ಕೃಷ್ಣನ್ ಅವರು, ಕಾಂಗ್ರೆಸ್ ಸಂಸದರಿಗೆ ಪ್ರಶಸ್ತಿ ಘೋಷಣೆಗೂ ಮೊದಲು ಮಾಹಿತಿ ನೀಡಲಾಗಿತ್ತು. ನಮ್ಮ ಸಂಸ್ಥೆಯ ಪ್ರತಿನಿಧಿಗಳು ಮತ್ತು ಪ್ರಶಸ್ತಿ ತೀರ್ಪುಗಾರರ ಅಧ್ಯಕ್ಷರು ತರೂರ್ ಅವರನ್ನು ಆಹ್ವಾನಿಸಲು ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಪ್ರಶಸ್ತಿಗೆ ಭಾಜನರಾಗುವ ಇತರರ ಪಟ್ಟಿಯನ್ನೂ ಕೇಳಿದ್ದರು ಎಂದು ತಿಳಿಸಿದ್ದಾರೆ.
ನಾವು ಪ್ರಶಸ್ತಿ ವಿಜೇತರ ಪಟ್ಟಿಯನ್ನು ನೀಡಿದ್ದೇವೆ. ಅವರು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಈವರೆಗೂ ನಮಗೆ ತಿಳಿಸಿಲ್ಲ. ಕಾಂಗ್ರೆಸ್ ಇದನ್ನು ರಾಜಕೀಯಗೊಳಿಸುವ ಸಾಧ್ಯತೆ ಇರುವುದರಿಂದ, ಬಹುಶಃ ಅವರು ಭಯಗೊಂಡಿದ್ದಾರೆ ಎಂದು ಕೃಷ್ಣನ್ ಅವರು ಹೇಳಿದ್ದಾರೆ.
ವಿ.ಡಿ. ಸಾವರ್ಕರ್ ಅವರ ಹೆಸರಿನ ಪ್ರಶಸ್ತಿಯನ್ನು ಶಶಿ ತರೂರ್ ಅವರಿಗೆ ಘೋಷಿಸಿದ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಅವರು ಈ ಬಗ್ಗೆ ಮಾತನಾಡಿ, ತರೂರ್ ಸೇರಿದಂತೆ ಪಕ್ಷದ ಯಾವುದೇ ಸದಸ್ಯರು ವೀರ್ ಸಾವರ್ಕರ್ ಅವರ ಹೆಸರಿನಲ್ಲಿ ಯಾವುದೇ ಪ್ರಶಸ್ತಿಯನ್ನು ಸ್ವೀಕರಿಸಬಾರದು. ಏಕೆಂದರೆ, ಅವರು ಬ್ರಿಟಿಷರ ಮುಂದೆ ತಲೆಬಾಗಿದವರು. ತರೂರ್ ಅವರು ಪ್ರಶಸ್ತಿ ಸ್ವೀಕರಿಸಿದರೆ, ಪಕ್ಷಕ್ಕೆ ಮುಜುಗರವಾಗಲಿದೆ. ಹೀಗಾಗಿ, ಅವರು ಪ್ರಶಸ್ತಿ ಪಡೆಯಲ್ಲ ಎಂದು ಭಾವಿಸುತ್ತೇನೆ ಎಂದಿದ್ದರು.

