ಹೊಸದಿಗಂತ ಬಳ್ಳಾರಿ:
ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಹತ್ಯಾ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸೋಮವಾರ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಎದುರು ಮತ್ತೊಂದು ಸಜೀವ ಗುಂಡು ಪತ್ತೆಯಾಗಿದೆ.
ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು 9 ಎಂಎಂ ಗಾತ್ರದ ಬುಲೆಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಪ್ರಸ್ತುತ ನಡೆಯುತ್ತಿರುವ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪೊಲೀಸರು ಸರಿಯಾದ ರೀತಿಯಲ್ಲಿ ಶೋಧ ನಡೆಸಿದರೆ ಕನಿಷ್ಠ 30 ಗುಂಡುಗಳು ಪತ್ತೆಯಾಗಬಹುದು. ಆದರೆ, ಪ್ರಕರಣದಲ್ಲಿ ನ್ಯಾಯ ಸಿಗುವ ಬಗ್ಗೆ ನನಗೆ ನಂಬಿಕೆಯಿಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಸಕ ಭರತ್ ರೆಡ್ಡಿ ಅವರ ಬೆನ್ನಿಗೆ ನಿಲ್ಲುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿರುವುದು ತನಿಖೆಯ ದಿಕ್ಕನ್ನು ತಪ್ಪಿಸುವ ಸಾಧ್ಯತೆಯಿದೆ,” ಎಂದು ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಹಸ್ತಕ್ಷೇಪದ ಭೀತಿಯನ್ನು ವ್ಯಕ್ತಪಡಿಸಿರುವ ಅವರು, ಪ್ರಕರಣದ ನೈಜತೆ ಹೊರಬರಲು ಕೂಡಲೇ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

