Saturday, August 30, 2025

ಬೆಲೆ ಏರಿಕೆ ಮಧ್ಯೆ ಕರ್ನಾಟಕದ ಜನತೆಗೆ ಮತ್ತೊಂದು ಹೊರೆ: ಆಸ್ತಿ ನೋಂದಣಿ ಶುಲ್ಕ ಹೆಚ್ಚಳ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಹಾಲು, ಬಸ್‌, ವಿದ್ಯುತ್‌, ನೀರು ಹಾಗೂ ಮೆಟ್ರೋ ದರ ಏರಿಕೆಗಳಿಂದ ಈಗಾಗಲೇ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ, ರಾಜ್ಯ ಸರ್ಕಾರ ಮತ್ತೊಂದು ಹೊರೆ ಹಾಕಿದೆ. ಕಂದಾಯ ಇಲಾಖೆ ಆಸ್ತಿ ನೋಂದಣಿ ಶುಲ್ಕವನ್ನು ಶೇ.1ರಿಂದ ಶೇ.2ರಷ್ಟು ಹೆಚ್ಚಿಸುವ ಆದೇಶ ಹೊರಡಿಸಿದ್ದು, ಈ ಹೊಸ ದರ ಆ.31ರಿಂದಲೇ ಜಾರಿಯಾಗಲಿದೆ.

ಇಲ್ಲಿಯವರೆಗೆ ನಿವೇಶನ, ಭೂಮಿ, ಮನೆ ಹಾಗೂ ಫ್ಲ್ಯಾಟ್ ಖರೀದಿ ಸಂದರ್ಭದಲ್ಲಿ ಶೇ.1ರಷ್ಟು ನೋಂದಣಿ ಶುಲ್ಕ ಹಾಗೂ ಶೇ.5.6ರಷ್ಟು ಮುದ್ರಾಂಕ ಶುಲ್ಕ ಸೇರಿ ಒಟ್ಟು ಶೇ.6.6ರಷ್ಟು ಪಾವತಿಸಲಾಗುತ್ತಿತ್ತು. ಆದರೆ ಹೊಸ ತಿದ್ದುಪಡಿ ಪ್ರಕಾರ, ಒಟ್ಟು ಶೇ.7.6ರಷ್ಟು ಶುಲ್ಕ ಕಟ್ಟಬೇಕಾಗುತ್ತದೆ. ಈ ಕುರಿತು ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಎಲ್ಲ ಉಪ ನೋಂದಣಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದೆ.

ಆಸ್ತಿ ಖರೀದಿಯಲ್ಲಿ ಸ್ವಾಧೀನ ಭೋಗ್ಯ ಪತ್ರ, ಸ್ಥಿರಾಸ್ತಿ ಶುದ್ಧ ಕ್ರಯ ಪತ್ರ ಸೇರಿದಂತೆ ಎಲ್ಲಾ ರೀತಿಯ ನೋಂದಣಿಗೆ ಈ ಶುಲ್ಕ ಅನ್ವಯವಾಗಲಿದೆ. 2024-25 ಹಾಗೂ 2025-26ರ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷಿತ ಆದಾಯ ತಲುಪದ ಕಾರಣ, ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.

ಅಧಿಕಾರಿಗಳ ಪ್ರಕಾರ, ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ನೋಂದಣಿ ಶುಲ್ಕ ಕಡಿಮೆಯಾಗಿತ್ತು. ಉದಾಹರಣೆಗೆ, ತಮಿಳುನಾಡಿನಲ್ಲಿ ಒಟ್ಟಾರೆ ಶೇ.11ರಷ್ಟು ಶುಲ್ಕ ವಸೂಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ