ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಹಲವು ಸವಾಲುಗಳನ್ನು ಎದುರಿಸುತ್ತಿರುವ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ (BCB) ಇದೀಗ ಆಟಗಾರರ ಆಂತರಿಕ ವಿರೋಧದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಬಿಸಿಬಿಯ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಹಸನ್ ವಿರುದ್ಧ ಬಾಂಗ್ಲಾದೇಶ್ ಕ್ರಿಕೆಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ರಾಜೀನಾಮೆ ನೀಡದಿದ್ದರೆ ಮುಂದಿನ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ (BPL) ಪಂದ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಬಾಂಗ್ಲಾದೇಶ್ ಕ್ರಿಕೆಟಿಗರ ಕಲ್ಯಾಣ ಸಂಘ (CWB) ಸ್ಪಷ್ಟ ನಿಲುವು ತಳೆದಿದ್ದು, ನಜ್ಮುಲ್ ಹಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರೆ ಮಾತ್ರ ಆಟಗಾರರು ಬಿಪಿಎಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಘೋಷಿಸಿದೆ. ಇದರಿಂದಾಗಿ ಲೀಗ್‌ನ ಮುಂದಿನ ಪಂದ್ಯಗಳು ನಡೆಯುವವೆಯೇ ಎಂಬ ಅನುಮಾನ ಮೂಡಿದೆ.
ಇತ್ತೀಚೆಗೆ ನಜ್ಮುಲ್ ಹಸನ್, ಟಿ20 ವಿಶ್ವಕಪ್‌ನಂತಹ ಐಸಿಸಿ ಟೂರ್ನಿಯಲ್ಲಿ ಬಾಂಗ್ಲಾದೇಶ್ ತಂಡ ಭಾಗವಹಿಸದಿದ್ದರೂ ಮಂಡಳಿಗೆ ಆರ್ಥಿಕ ನಷ್ಟವಾಗುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಆಟಗಾರರಿಗೆ ಮಾತ್ರ ಪಂದ್ಯ ಶುಲ್ಕದ ನಷ್ಟವಾಗುತ್ತದೆ ಎಂದು ಅವರು ಹೇಳಿದ್ದೇ ವಿವಾದಕ್ಕೆ ಕಾರಣವಾಯಿತು. ಅಲ್ಲದೆ, ಮಾಜಿ ನಾಯಕ ತಮೀಮ್ ಇಕ್ಬಾಲ್ ವಿರುದ್ಧ “ಭಾರತೀಯ ಏಜೆಂಟ್” ಎಂಬ ಟೀಕೆಯನ್ನು ಮಾಡಿದ್ದರಿಂದ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.


