ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನಕಳೆದಂತೆ ಹೆಚ್ಚಾಗುತ್ತಿದೆ. ವಂಚಕರ ಜಾಲಕ್ಕೆ ಸಿಲುಕಿ ಅದೆಷ್ಟೋ ಮಂದಿ ಹಣ ಕಳೆದುಕೊಂಡಿದ್ದಾರೆ. ಈಗ ಅಂತಹುದೇ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ 66 ವರ್ಷದ ನಿವೃತ್ತ ವ್ಯಕ್ತಿಯೊಬ್ಬರಿಗೆ ವಂಚಕರು ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ₹1.62 ಕೋಟಿ ರೂ. ವಂಚಿಸಿದ್ದಾರೆ.
ಸೆಪ್ಟೆಂಬರ್ 27 ರಂದು ಮಧ್ಯಾಹ್ನ 2:30 ಗಂಟೆಗೆ ವಂಚಕ ಒಬ್ಬರು ಕರೆ ಮಾಡಿ ಮುಂಬೈನ ಐಷಾರಾಮಿ ಹೋಟೆಲ್ ಮೇಲೆ ದಾಳಿ ನಡೆದಿದ್ದು, ನಿಮ್ಮ ಹೆಸರಿನಲ್ಲಿ ಕೆಲವು ದಾಖಲೆಗಳು ಸಿಕ್ಕಿವೆ ಎಂದು ಹೆದರಿಸಿದ್ದಾರೆ. ನಂತರ, ವಂಚಕ ವಿಡಿಯೋ ಕಾಲ್ ಮೂಲಕ ತಮ್ಮನ್ನು ಸೈಬರ್ ಅಪರಾಧ ಠಾಣೆಯ ಇನ್ಸ್‌ಪೆಕ್ಟರ್ “ಕುಲದೀಪ್ ಸಿಂಗ್” ಎಂದು ಪರಿಚಯಿಸಿಕೊಂಡಿದ್ದಾರೆ.
ವಂಚಕ ಪೊಲೀಸ್ ಸಮವಸ್ತ್ರದಲ್ಲಿ ಇದ್ದಂತೆ ಪ್ರದರ್ಶಿಸಿ, ವ್ಯಕ್ತಿಯನ್ನು ಮಾನವ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆಯ ಪ್ರಕರಣಗಳಲ್ಲಿ ಬಂಧಿಸಲಾಗುವುದಾಗಿ ಬೆದರಿಸಿದ್ದಾರೆ. ಭಯಭೀತನಾದ ನಿವೃತ್ತ ವ್ಯಕ್ತಿ ತಮ್ಮ ಎಲ್ಲಾ ಬ್ಯಾಂಕ್ ಖಾತೆಗಳು, ಸ್ಥಿರ ಠೇವಣಿ, ಎಫ್‌ಡಿ ವಿವರಗಳು ಸೇರಿದಂತೆ ₹1,62,77,160 ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ವಂಚಕನ ಹೇಳಿಕೆಗಳ ಬೆದರಿಕೆಯಿಂದ ಅವರು ಒಟಿಪಿಗಳನ್ನು ಸಹ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.