ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ 12ಕ್ಕೂ ಹೆಚ್ಚು ನಕ್ಸಲರು ಹತರಾಗಿದ್ದಾರೆ. ಮೂವರು ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ.
ಬಿಜಾಪುರ ಮತ್ತು ದಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ಪಶ್ಚಿಮ ಬಸ್ತಾರ್ ವಿಭಾಗ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಯುತ್ತಿದೆ. 12 ಮಾವೋವಾದಿ ಕಾರ್ಯಕರ್ತರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಎನ್‌ಕೌಂಟರ್ ಸ್ಥಳದಿಂದ ಎಸ್‌ಎಲ್‌ಆರ್ ರೈಫಲ್‌ಗಳು, 303 ರೈಫಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಕೌಂಟರ್‌ನಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಬಸ್ತಾರ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಲಿಂಗಂ ಹೇಳಿದ್ದಾರೆ.
ಎನ್‌ಕೌಂಟರ್ ಬಗ್ಗೆ ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಡಾ. ಜಿತೇಂದ್ರ ಯಾದವ್ ಅವರು ಮಾತನಾಡಿದ್ದು, ಬಿಜಾಪುರ-ದಂತೆವಾಡ ಅಂತರ ಜಿಲ್ಲಾ ಗಡಿ ಪ್ರದೇಶದ ಪಶ್ಚಿಮ ಬಸ್ತಾರ್ ವಿಭಾಗ ಪ್ರದೇಶದಲ್ಲಿ ಡಿಆರ್‌ಜಿ ದಂತೇವಾಡ – ಬಿಜಾಪುರ, ಎಸ್‌ಟಿಎಫ್, ಕೋಬ್ರಾ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡವು ಇಂದು ಬೆಳಗ್ಗೆ 9 ಗಂಟೆಯಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

