ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಉಗ್ರ ಸಂಚೊಂದನ್ನು ವಿಫಲಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ನರೋತ್ ಜೈಮಲ್ ಸಿಂಗ್ ಗಡಿ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರು 3 ಎಕೆ–47 ರೈಫಲ್‌ಗಳು, 2 ಪಿಸ್ತೂಲ್‌ಗಳು ಹಾಗೂ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಠಾಣ್‌ಕೋಟ್ ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಸಂಸ್ಥೆಗಳ ಅಧಿಕಾರಿಗಳು ಸಂಯುಕ್ತವಾಗಿ ಈ ಕಾರ್ಯಾಚರಣೆ ನಡೆಸಿದ್ದರು. ಶೋಧದ ವೇಳೆ 3 ಎಕೆ–47 ರೈಫಲ್‌ಗಳು, 5 ಮ್ಯಾಗಜೀನ್‌ಗಳು, ಟರ್ಕಿ ಮತ್ತು ಚೀನಾ ನಿರ್ಮಿತ 2 ಪಿಸ್ತೂಲ್‌ಗಳು ಹಾಗೂ 98 ಸಜೀವ ಗುಂಡುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಅಶಾಂತಿ ಉಂಟುಮಾಡುವ ಉದ್ದೇಶದಿಂದ ಪಾಕಿಸ್ತಾನದಿಂದ ಈ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಲಭ್ಯವಿರುವ ಗುಪ್ತಚರ ಮಾಹಿತಿಯ ಪ್ರಕಾರ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಉಗ್ರ ಜಾಲ ಇದರಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಯ ಬಳಿಕ ಗಡಿ ಪ್ರದೇಶದಲ್ಲಿ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.


