March 10, 2026
Tuesday, March 10, 2026
spot_img

ಪ್ರಜ್ವಲ್‌ ರೇವಣ್ಣಗೆ ಮತ್ತೊಂದು ಶಾಕ್‌: ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಕಾರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಸೆರೆವಾಸ ಅನುಭವಿಸುತ್ತಿರುವ ಪ್ರಜ್ವಲ್‌ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್‌ ಮತ್ತೊಂದು ಶಾಕ್‌ ನೀಡಿದೆ.

ಈಗಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್‌ ರೇವಣ್ಣ ಇದನ್ನು ಬದಿಗೆ ಸರಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ (ಡಿಸೆಂಬರ್‌ 3) ವಜಾಗೊಳಿಸಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ಗನ್ನಿಕಾಡದ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದದಲ್ಲಿ ಪ್ರಜ್ವಲ್​ ರೇವಣ್ಣ ಶಿಕ್ಷೆಗೆ ಒಳಗಾಗಿದ್ದಾರೆ.

ನ್ಯಾಯಮೂರ್ತಿಗಳಾದ ಕೆ.ಎಸ್‌. ಮುದಗಲ್‌ ಮತ್ತು ಟಿ.ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠವು, ದಾಖಲೆ, ಅಪರಾಧದ ಗಂಭೀರತೆ ಪರಿಗಣಿಸಿ ಪ್ರಜ್ವಲ್‌ ಬಿಡುಗಡೆ ಮಾಡಿದರೆ ಅದು ಇತರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಪ್ರಜ್ವಲ್‌ಗೆ ವಿಧಿಸಿರುವ ಆಜೀವ ಶಿಕ್ಷೆ ಬದಿಗೆ ಸರಿಸಿ ಜಾಮೀನು ಮಂಜೂರು ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಪ್ರಜ್ವಲ್‌ ಪರ ವಾದ ಮಂಡಿಸಿದ್ದು, ರಾಜಕೀಯ ಪ್ರತೀಕಾರ, ಸಂತ್ರಸ್ತೆ ದೂರು ದಾಖಲಿಸಲು ವಿಳಂಬ ಮಾಡಿರುವುದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿನ ವ್ಯತ್ಯಾಸ, ಅಶ್ಲೀಲ ವಿಡಿಯೊ ಜಫ್ತಿಯಾಗಿಲ್ಲ, ಗನ್ನಿಗಢ ತೋಟವು ಪ್ರಜ್ವಲ್‌ಗೆ ಸೇರಿಲ್ಲವಾದ್ದರಿಂದ ಅವರು ಅಲ್ಲಿಗೆ ಹೋಗಿಯೇ ಇಲ್ಲ. ಬಸವನಗುಡಿಯ ಮನೆಗೂ ಪ್ರಜ್ವಲ್‌ ಹೋಗಿಲ್ಲ. ಸಂತ್ರಸ್ತೆಯು ಗನ್ನಿಗಢ ತೋಟದಲ್ಲಿ ಕೆಲಸವನ್ನೇ ಮಾಡಿಲ್ಲ, ಆ ತೋಟವು ಪ್ರಕಾಶ್‌ ಎಂಬವರಿಗೆ ಸೇರಿದೆ. ಡಿಎನ್‌ಎ ಪರೀಕ್ಷೆಯನ್ನು ಕಾನೂನಿಗೆ ಅನ್ವಯವಾಗಿ ನಡೆಸಿಲ್ಲ ಇತ್ಯಾದಿ ವಿಚಾರಗಳ ಕುರಿತು ವಾದಿಸಿದ್ದಾರೆ.

ಪ್ರಜ್ವಲ್‌ಗೆ ವಿಧಿಸಿರುವ ಶಿಕ್ಷೆಯನ್ನು ಬದಿಗೆ ಸರಿಸಲು ಸಾಕ್ಷಿಗಳು ಅತ್ಯಂತ ದುರ್ಬಲವಾಗಿವೆ ಎಂದು ಲೂಥ್ರಾ ಸಾಬೀತುಪಡಿಸಿಲ್ಲ. ಇದೇ ಕಾರಣಕ್ಕಾಗಿ ಲೂಥ್ರಾ ಅವರ ವಾದವನ್ನು ಒಪ್ಪಲಾಗುತ್ತಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ “ಈ ಪ್ರಕರಣದಲ್ಲಿ ಪ್ರಜ್ವಲ್‌ ಶಿಕ್ಷೆ ಅಮಾನತುಪಡಿಸಿದರೆ ಉಳಿದ ಪ್ರಕರಣಗಳಲ್ಲಿ ಸಾಕ್ಷಿ ತಿರುಚುವ ಸಾಧ್ಯತೆ ಇದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗಿದ್ದು, ವಾದ ಮಂಡಿಸಲು ಸಿದ್ಧವಾಗಿದ್ದೇವೆ. ಮೇಲ್ಮನವಿದಾರರು ಮೆರಿಟ್‌ ಮೇಲೆ ವಾದಿಸಬಹುದು” ಎಂದಿರುವುದಕ್ಕೆ ನ್ಯಾಯಾಲಯ ಸಮ್ಮತಿಸಿದೆ. ಆ ಮೂಲಕ ಪ್ರಜ್ವಲ್‌ ರೇವಣ್ಣ ಅವರಿಗೆ ಹಿನ್ನಡೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !