January20, 2026
Tuesday, January 20, 2026
spot_img

ಲಕ್ಕುಂಡಿಯಲ್ಲಿ ಮತ್ತೊಂದು ಅಚ್ಚರಿ: ಮನೆಯೊಳಗೆ ಪುರಾತನ ದೇವಸ್ಥಾನ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗದಗ ಲಕ್ಕುಂಡಿಯಲ್ಲಿ ಐದನೇ ದಿನದ ಉತ್ಖನನ ಕಾರ್ಯ ಮುಗಿದಿದ್ದು 2ನೇ ದಿನ ಗೋಚರವಾಗಿದ್ದ ಶಿವಲಿಂಗದ ಪಾಣಿಪೀಠವನ್ನು ಪುರಾತತ್ವ ಸಿಬ್ಬಂದಿ ಹೊರ ತೆಗೆದಿದ್ದಾರೆ.

ಈ ಪಾಣಿಪೀಠ ಎರಡೂ ಭಾಗವಾಗಿ ಒಡೆದು ಹೋಗಿದೆ. ಶಿವಲಿಂಗ ಇರುವ ಮಧ್ಯದ ಭಾಗ ತುಂಡಾಗಿದ್ದು ಈಗ ಈ ಭಾಗದ ಶೋಧ ಕಾರ್ಯ ನಡೆಯುತ್ತಿದೆ. ಕೈ‌ಮುಗಿದು, ಪದ್ಮಾಸನದಲ್ಲಿ ಕುಳಿತ ಶಿಲಾಕೃತಿಯನ್ನು ಪಾಣಿಪೀಠದ ಬಲ ಭಾಗದಲ್ಲಿ ಕೆತ್ತಲಾಗಿದೆ. ಇಂದು ಮುಂಜಾನೆ ಪುರಾತನ ಕಾಲದ ಮಡಿಕೆ ಹಾಗೂ ಕವಡೆ ಪತ್ತೆಯಾಗಿತ್ತು. ಈಗ ಪುರಾತತ್ವ ಇಲಾಖೆ ಸಿಬ್ಬಂದಿ ಫೋಟೋಗ್ರಾಫಿ ಹಾಗೂ ಅದರ ಕುರುಹುಗಳ ದಾಖಲು ಮಾಡಿದ್ದಾರೆ.

ಈಶ್ವರನ ಗರ್ಭಗುಡಿ ಪತ್ತೆ
ಜೊತೆಗೆ ಗ್ರಾಮದ ಕುಂಬಾರ ಓಣಿಯಲ್ಲಿರುವ ಮನೆಯೊಂದರ ಹಾಲ್ ಪಕ್ಕದಲ್ಲೇ 10ನೇ ಶತಮಾನದ ಪುರಾತನ ಈಶ್ವರನ ಗರ್ಭಗುಡಿ ಪತ್ತೆಯಾಗಿದ್ದು, ಇಡೀ ನಾಡಿನ ಗಮನ ಸೆಳೆಯುತ್ತಿದೆ.

ಲಕ್ಕುಂಡಿಯ ಕುಂಬಾರ ಓಣಿಯಲ್ಲಿರುವ ಚೌಕಿಮಠ ಎಂಬುವವರ ಮನೆ ಹೊರನೋಟಕ್ಕೆ ಸಾಮಾನ್ಯ ಮನೆಯಂತೆ ಕಂಡರೂ, ಅದರ ಒಳಾಂಗಣ ಮಾತ್ರ ಅದ್ಭುತ ಇತಿಹಾಸವನ್ನು ತನ್ನೊಳಗೆ ಅಡಗಿಸಿಕೊಂಡಿದೆ.ಮನೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ಅಲ್ಲಿ ಸುಂದರವಾದ ಮಂಟಪ ಹಾಗೂ ಮಹಾಂತೇಶ್ವರ ದೇವರ ಮೂರ್ತಿ ಕಣ್ಮನ ಸೆಳೆಯುತ್ತದೆ. ಕುಟುಂಬದ ಸದಸ್ಯರು ಓಡಾಡುವ ಮನೆಯ ಹಾಲ್‌ನ ಪಕ್ಕದಲ್ಲೇ ಪುರಾತನ ಈಶ್ವರನ ಗರ್ಭಗುಡಿಯಿದೆ.

ಚೌಕಿಮಠ ಕುಟುಂಬದವರು ಕಳೆದ ನಾಲ್ಕು ತಲೆಮಾರುಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸುಮಾರು 10ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ಐತಿಹಾಸಿಕ ದೇವಸ್ಥಾನದ ಆವರಣವನ್ನೇ ಅವರು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ.

ಲಕ್ಕುಂಡಿಯಲ್ಲಿ ಈಗಷ್ಟೇ ಪುರಾತತ್ವ ಇಲಾಖೆಯಿಂದ ಉತ್ಖನನ ಕಾರ್ಯ ಚುರುಕುಗೊಂಡಿರುವ ಬೆನ್ನಲ್ಲೇ, ಹಳೆಯ ಕಾಲದ ವಾಸ್ತುಶಿಲ್ಪ ಮತ್ತು ಆಧುನಿಕ ಜೀವನ ಶೈಲಿ ಒಂದೇ ಸೂರಿನಡಿ ಇರುವುದು ಇಲ್ಲಿನ ವಿಶೇಷ.

Must Read