Saturday, January 3, 2026

ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ: ಪುತ್ರನ ವಿರುದ್ದ 228 ಕೋಟಿ ರೂ. ವಂಚನೆ ಕೇಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಈಗಾಗಲೇ ಒಂದರ ಮೇಲೊಂದು ಸಮಸ್ಯೆಯಲ್ಲಿರುವ ಉದ್ಯಮಿ ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ವಿರುದ್ಧ ಸಿಬಿಐ 228 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಿಸಿದೆ.

ಹಲವು ಬ್ಯಾಂಕ್‌ಗಳು ಅನಿಲ್ ಅಂಬಾನಿ ಸೇರಿದಂತೆ ಇಬ್ಬರು ವಿರುದ್ದ ದೂರು ನೀಡಿದೆ. ಇದರ ಪರಿಣಾಮ ಪ್ರಕರಣ ಗಂಭೀರ ಸ್ವರೂಪ ಪಡದುಕೊಂಡಿದೆ.

ಯೂನಿಯನ್ ಬ್ಯಾಂಕ್ ನೆರವು ಬಳಸಿಕೊಂಡು ರಿಲಯನ್ಸ್ ಹೋಮ್ ಫಿನಾನ್ಸ್ ಲಿಮಿಟೆಡ್ (RHFL) ನೂರಾರು ಕೋಟಿ ರೂಪಾಯಿ ವಂಚನೆ ಮಾಡಿದೆ ಎಂದು ಆಂಧ್ರ ಬ್ಯಾಂಕ್ ದೂರು ನೀಡಿದೆ. RHFL ನಿರ್ದೇಶಕರಾಗಿದ್ದ ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್, ರವೀಂದ್ರ ಶರದ್ ಸುಧಾಕರ್ ವಿರುದ್ದ ದೂರು ದಾಖಲಾಗಿದೆ.

ಆಂಧ್ರ ಬ್ಯಾಂಕ್ ನೀಡಿರುವ ದೂರಿನ ಪ್ರಕಾರ, RHFL ಕಂಪನಿ 450 ಕೋಟಿ ರೂಪಾಯಿ ಸಾಲ ಪಡೆದಿತ್ತು. ಉದ್ಯಮದ ಕಾರಣದಿಂದ ಈ ಸಾಲವನ್ನು ಮುಂಬೈನ ಆಂಧ್ರ ಬ್ಯಾಂಕ್ ಎಸ್‌ಸಿಎಫ್ ಶಾಖೆಯಿಂದ ಪಡೆದಿತ್ತು. ಸಾಲ ನೀಡುವಾಗ ಬ್ಯಾಂಕ್ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿತ್ತು. ಮರುಪಾವತಿ, ಬಡ್ಡಿ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ RHFL ಸಹಿ ಮಾಡಿ ಸಾಲ ಪಡೆದುಕೊಂಡಿತ್ತು. ಬಳಿಕ ಕಂಪನಿ ಸಾಲ ಮರುಪಾವತಿಸಲು ಹಿಂದೇಟು ಹಾಕಿತ್ತು. ಹಲವು ಬಾರಿ ನೊಟೀಸ್ ಬಳಿಕ ಕಂಪನಿ ದಿವಾಳಿ ಎಂದು ತೋರಿಸಿತ್ತು. ಹೀಗಾಗಿ 2019 ಸೆಪ್ಟೆಂಬರ್ 30 ರಂದು RHFL ಕಂಪನಿ ಎನ್‌ಪಿಎ ಲಿಸ್ಟ್‌ಗೆ ಸೇರಿಸಲಾಗಿತ್ತು.

ರಿಲಯನ್ಸ್ ಹೋಮ್ ಫಿನಾನ್ಸ್ ಲಿಮಿಟೆಡ್ ಕಂಪನಿ ಎಪ್ರಿಲ್ 1, 2016 ರಿಂದ ಜೂನ್ 30, 2019ರ ಅವಧಿಯಲ್ಲಿನ ಎಲ್ಲಾ ವಹಿವಾಟುಗಳನ್ನು ಫೊರೆನ್ಸಿಕ್ ಆಡಿಟ್ ಪರೀಶೀಲನೆ ಮಾಡಿತ್ತು. ಗ್ರ್ಯಾಂಟ್ ಥೊರ್ಟನ್ ನಡೆಸಿದ ಈ ಆಡಿಟ್‌ನಲ್ಲಿ ರಿಲಯನ್ಸ್ ಹೋಮ್ ಫಿನಾನ್ಸ್ ಬಂಡವಾಳ ಬಯಲಾಗಿತ್ತು. ಉದ್ಯಮ ವಿಸ್ತರಣೆ,ನಿರ್ವಹಣೆಗಾಗಿ ಸಾಲ ಪಡೆದದ್ದ RHFL ಕಂಪನಿ ಹಣವನ್ನು ಬೇರೆ ಉದ್ದೇಶಗಳಿಗೆ ವರ್ಗಾವಣೆ ಮಾಡಿತ್ತು. ಸಾಲವನ್ನು ಸರಿಯಾದ ರೀತಿಯಲ್ಲಿ, ಸರಿಯಾದ ಉದ್ದೇಶಕ್ಕೆ ಬಳಸಿಕೊಳ್ಳದೇ, ಬೇರೆ ಖಾತೆಗಳಿಗೆ, ಸಂಬಂಧವಿಲ್ಲದ ಖಾತೆಗಳಿಗೆ ವರ್ಗಾವಣೆ ಮಾಡಿ ಬೇರೆ ಹೂಡಿಕೆಯಲ್ಲಿ ತೊಡಗಿಸಿಕೊಂಡಿತ್ತು. ಈ ಮೂಲಕ ನಿಯಮ ಉಲ್ಲಂಘನೆ ಮಾಡಿದೆ ಎಂದು ಆಡಿಟ್‌ನಲ್ಲಿ ಬಯಲಾಗಿತ್ತು. ಇದೀಗ ಸಿಬಿಐ ಈ ಪ್ರಕರಣದ ತನಿಖೆಗೆ ಮುಂದಾಗಿದೆ.

error: Content is protected !!