Saturday, October 11, 2025

BMTCಗೆ ಮತ್ತೊಂದು ಬಲಿ: ಟ್ಯೂಷನ್ ಮುಗಿಸಿ ಮನೆಗೆ ಹೊರಟಿದ್ದ ಬಾಲಕಿ ಸೇರಿದ್ದು ಮಸಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ಬಿಎಂಟಿಸಿ ಬಸ್ ಅಪಘಾತಗಳು ಮತ್ತೆ ಜೀವಹಾನಿಗೆ ಕಾರಣವಾಗಿವೆ. ಇಂದು ಮಧ್ಯಾಹ್ನ ರಾಜಾಜಿನಗರದಲ್ಲಿ ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ 9 ವರ್ಷದ ಬಾಲಕಿ ಭುವನಾ ಬಿಎಂಟಿಸಿ ಬಸ್‌ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಘಟನೆ ರಾಜಾಜಿನಗರ 1ನೇ ಬ್ಲಾಕ್‌ನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ. ಟ್ಯೂಷನ್ ಮುಗಿಸಿ ಸ್ನೇಹಿತರೊಂದಿಗೆ ಮನೆಗೆ ನಡೆದುಕೊಂಡು ಬರುತ್ತಿದ್ದ ಭುವನಾ ಮೇಲೆ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯಲ್ಲಿ ಬಾಲಕಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ದೃಶ್ಯ ಕಂಡ ಸ್ನೇಹಿತೆಯರು ಶಾಕ್‌ನಿಂದ ಕಣ್ಣೀರಿಟ್ಟಿದ್ದಾರೆ.

ಮೃತ ಬಾಲಕಿ ಭುವನಾ ರಾಜಾಜಿನಗರದ ಪಾಂಚಜನ್ಯ ವಿದ್ಯಾಪೀಠದಲ್ಲಿ ವ್ಯಾಸಂಗ ಮಾಡುತ್ತಿದ್ದು, ಪೋಷಕರು ಜೋಳ ಮಾರಾಟದ ಮೂಲಕ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಕುಟುಂಬವು ಮಹಾಲಕ್ಷ್ಮಿ ಲೇಔಟ್ ಬೋವಿ ಪಾಳ್ಯದಲ್ಲಿ ವಾಸಿಸುತ್ತಿದ್ದು, ದುರಂತದ ಸುದ್ದಿ ಕೇಳಿ ಸ್ಥಳಕ್ಕೆ ಧಾವಿಸಿದ್ದಾರೆ. ಮೃತದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

error: Content is protected !!