Sunday, September 14, 2025

ಲಂಡನ್​​ನಲ್ಲಿ ವಲಸೆ ವಿರೋಧಿ ಪ್ರತಿಭಟನೆ: ಪೊಲೀಸರ ಮೇಲೆ ಹಲ್ಲೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲಂಡನ್‌ನಲ್ಲಿ ಬಲಪಂಥೀಯ ನಾಯಕ ಟಾಮಿ ರಾಬಿನ್ಸ್‌ನ ನಡೆಸಿದ ವಲಸೆ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಜನ ಪೊಲೀಸರ ಮೇಲೆಯೇ ಹಲ್ಲೆ ಮಾಡಿದಂತಹ ಘಟನೆ ನಡೆದಿದೆ .

ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ

ಈ ಪ್ರತಿಭಟನಾ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಲಕ್ಷಕ್ಕೂ ಅಧಿಕ ಜನ ಸೇರಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸುವುದಕ್ಕೆ ಪೊಲೀಸರು ಹರಸಾಹಸಪಟ್ಟಿದ್ದಾರೆ.

ಬಲಪಂಥೀಯ ನಾಯಕ ಟಾಮಿ ರಾಬಿನ್ಸನ್ ಅವರ ಬೆಂಬಲಿಗರ ಒಂದು ಸಣ್ಣ ಗುಂಪು ಪ್ರತಿಭಟನಾಕಾರರಿಂದ ತಮ್ಮನ್ನು ಬೇರ್ಪಡಿಸುತ್ತಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ನಂತರ ಈ ಘಟನೆ ಸಂಭವಿಸಿದೆ. ಇದರಿಂದ ಆಕ್ರೋಶಗೊಂಡ ಕೆಲ ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಟಲ್‌ಗಳು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಯುನೈಟ್ ದಿ ಕಿಂಗ್‌ಡಮ್ ರಾಲಿಯಲ್ಲಿ ಈ ಘಟನೆ ಸಂಭವಿಸಿದೆ ಪ್ರತಿಭಟನಾಕಾರರ ನಿಯಂತ್ರಣಕ್ಕೆ ಇಳಿದ 1000ಕ್ಕೂ ಅಧಿಕ ಪೊಲೀಸರಿಗೆ ಹೆಲ್ಮೆಟ್ ಹಾಗೂ ಗಲಭೆ ನಿಯಂತ್ರಿಸುವ ಕವಚಗಳನ್ನ ನೀಡಲಾಯ್ತು ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ 26 ಪೊಲೀಸರು ಗಾಯಗೊಂಡಿದ್ದಾರೆ. ಅದರಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಕೆಲವರ ಹಲ್ಲು ಮುರಿದಿದೆ. ಹಾಗೆಯೇ ಕೆಲವರಿಗೆ ಮೂಗಿಗೆ ಗಾಯವಾಗಿದೆ. ಕೆಲವರ ಬೆನ್ನುಮೂಳೆಗೂ ಗಾಯವಾಗಿದೆ. ಘಟನೆಗೆ ಸಂಬಂಧಿಸಿದಂತೆ 25ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಹಲ್ಲೆ, ಹಾನಿ, ಹಿಂಸಾಚಾರದಿಂದ ಕೂಡಿದ ಹಾನಿ ಆರೋಪ ಹೊರಿಸಲಾಗಿದೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಸ್ಲಾಂ ಹಾಗೂ ಏಷ್ಯಾದಿಂದ ವಲಸೆ ಬರುವವರ ವಿರುದ್ಧ ಪ್ರತಿಭಟನೆ:
ಲಂಡನ್‌ನ ಬಲಪಂಥೀಯ ನಾಯಕ ಟಾಮಿ ರಾಬಿನ್ಸನ್‌ ಮೂಲ ಹೆಸರು ಸ್ಟೀಫನ್ ಯಾಕ್ಸ್ಲಿ ಲೆನನ್ ಆಗಿದ್ದು, ಈತ ರಾಷ್ಟ್ರೀಯವಾದಿಯಾಗಿದ್ದು, ಇಸ್ಲಾಂ ವಿರೋಧಿ ಇಂಗ್ಲಿಷ್ ಡಿಫೆನ್ಸ್ ಲೀಗ್ ಅನ್ನು ಸ್ಥಾಪಿಸಿದ್ದ. ಈತ ಬ್ರಿಟನ್‌ನ ಅತ್ಯಂತ ಪ್ರಭಾವಶಾಲಿ ಬಲಪಂಥೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.ಈ ಮೆರವಣಿಗೆಯನ್ನು ವಾಕ್ ಸ್ವಾತಂತ್ರ್ಯವನ್ನು ಬೆಂಬಲಿಸುವ ಪ್ರದರ್ಶನವೆಂದು ಬಿಂಬಿಸಲಾಗಿತ್ತು. ಈ ಸಮಾವೇಶದಲ್ಲಿ ಐರೋಪ್ಯದ ಬಲಪಂಥೀಯ ನಾಯಕರು ಪಾಲ್ಗೊಂಡಿದ್ದು, ವಲಸೆಯಿಂದ ಮೂಲ ನಿವಾಸಿಗಳಿಗಾಗುತ್ತಿರುವ ಹಾನಿಯ ಬಗ್ಗೆ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ