ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಪ್ರಕಾಶ್ ರಾಜ್ ಕ್ಷಮೆಯಾಚಿಸಿದ್ದಾರೆ. ಬೆಟ್ಟಿಂಗ್ ವೇದಿಕೆಗಳಲ್ಲಿ ಆರ್ಥಿಕ ನಷ್ಟದಿಂದಾಗಿ ಹಲವಾರು ಯುವಕರು ತಮ್ಮ ಪ್ರಾಣವನ್ನು ತೆಗೆದುಕೊಂಡಿದ್ದಾರೆ ಎಂಬ ಆರೋಪದ ನಂತರ ಬೆಟ್ಟಿಗೆ ಆ್ಯಪ್ ಗೆ ಬೆಂಬಲ ನೀಡಿದ್ದಕ್ಕಾಗಿ ಅವರು ಕ್ಷಮೆ ಕೋರಿದ್ದಾರೆ.
ಬೆಟ್ಟಿಂಗ್ ಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಅಪರಾಧ ತನಿಖಾ ಇಲಾಖೆ (CID) ಮುಂದೆ ಬುಧವಾರ ವಿಚಾರಣೆಗೆ ಹಾಜರಾದ ಪ್ರಕಾಶ್ ರಾಜ್ , ತಮ್ಮ ಹೇಳಿಕೆಯನ್ನು ದಾಖಲಿಸಿದರು. ನಟರಾದ ದಗ್ಗುಬಾಟ್ಟಿ ರಾಣಾ ಮತ್ತು ಮಂಚು ಲಕ್ಷ್ಮಿ ಸೇರಿದಂತೆ ಹಲವಾರು ಆರೋಪಿಗಳಲ್ಲಿ ಪ್ರಕಾಶ್ ರಾಜ್ ಕೂಡಾ ಒಬ್ಬರಾಗಿದ್ದಾರೆ.
ನಾನು 2016 ರಲ್ಲಿ ಗೇಮಿಂಗ್ ಆ್ಯಪ್ ಅನ್ನು ಪ್ರಚಾರ ಮಾಡಿದ್ದೆ. ಆ ಆ್ಯಪ್ 2017 ರಲ್ಲಿ ಬೆಟ್ಟಿಂಗ್ ಆ್ಯಪ್ ಆಗಿ ರೂಪಾಂತರಗೊಂಡಿತು. ನಂತರ ನನ್ನ ಒಪ್ಪಂದವನ್ನು ರದ್ದುಗೊಳಿಸಿದೆ. ನಾನು ಅದನ್ನು ತಿಳಿದೋ ಅಥವಾ ತಿಳಿಯದೆಯೋ ಮಾಡಿದ್ದೇನೆ. ಆದರೂ ತಪ್ಪಾಗಿದೆ. ಆದ್ದರಿಂದ ನಾನು ಇದಕ್ಕೆ ಕ್ಷಮೆಯಾಚಿಸುತ್ತೇನೆ ಎಂದರು.

