April 12, 2026
Sunday, April 12, 2026
spot_img

ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರ ನೇಮಕ: ರಾಜ್ಯ ಸರಕಾರದ ವಿರುದ್ಧ ಸಭಾಪತಿ ಹೊರಟ್ಟಿ ಆಕ್ರೋಶ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಪತ್ರ ಬರೆದ ಅವರು, ಈಗಾಗಲೇ ಮತದಾನ, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಶಿಕ್ಷಕರು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಮಕ್ಕಳಿಗೆ ಹಾಲು-ಮೊಟ್ಟೆ ವಿತರಣೆಯಂತಹ ಬೋಧಕೇತರ ಕೆಲಸಗಳಲ್ಲಿಯೂ ನಿರತರಾಗಿದ್ದಾರೆ. ಇದರ ನಡುವೆ ನಾಯಿ ಕಾಯುವ ಜವಾಬ್ದಾರಿ ನೀಡುವುದು ಹಾಸ್ಯಾಸ್ಪದ. ಶಿಕ್ಷಕ ಸಮುದಾಯಕ್ಕೆ ಮಾಡುವ ಅವಮಾನ ಎಂದು ತಿಳಿಸಿದ್ದಾರೆ.

ಶಿಕ್ಷಕರು ಹಲವು ಕೆಲಸಗಳನ್ನು ನಿರ್ವಹಿಸುತ್ತಿರುವ ಕಾರಣ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚು ಗಮನ ಹರಿಸಲು ಆಗುತ್ತಿಲ್ಲ. ಇದರಿಂದ ಮಕ್ಕಳ ಕಲಿಕೆಯ ಗುಣಮಟ್ಟ ಕಡಿಮೆಯಾಗಿ ಫಲಿತಾಂಶವು ಸಹ ಕಡಿಮೆಯಾಗುತ್ತದೆ. ಜೊತೆಗೆ ಇದು ಸರ್ಕಾರವು ಶಿಕ್ಷಕರನ್ನು ನಾಯಿಗಳಿಗಿಂತ ಕಡೆಯದಾಗಿ ನೋಡುತ್ತಿದೆ ಎನ್ನುವ ಅರ್ಥದಲ್ಲಿ ಬಿಂಬಿತವಾಗುತ್ತದೆ ಎಡನು ಹೇಳಿದ್ದಾರೆ.

ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವು ಜನಗಣತಿ ಆರಂಭಿಸುತ್ತಿದ್ದು ಅದರಲ್ಲೂ ಈ ಶಿಕ್ಷಕರೇ ಪಾಲ್ಗೊಳ್ಳಬೇಕಿದೆ. ಶಿಕ್ಷಕರ ಕೊರತೆಯ ನಡುವೆಯೇ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಿಗೂ ಅವರನ್ನು ನಿಯೋಜಿಸುವುದರ ಜೊತೆಗೆ ಈಗ ಬೀದಿ ನಾಯಿಗಳ ನಿಯಂತ್ರಣ ಹೊಣೆ ಅವರಿಗೆ ನೀಡಲು ಹೊರಟ ಕ್ರಮ ನಿಜಕ್ಕೂ ಹಾಸ್ಯಾಸ್ಪದ. ಹೀಗಾಗಿ ಈ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಹೊರಟ್ಟಿ ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !