Tuesday, December 2, 2025

ಬೀದಿ ನಾಯಿ ನಿಯಂತ್ರಣಕ್ಕೆ ಶಿಕ್ಷಕರೇ ಜವಾಬ್ದಾರರೇ? ಸರ್ಕಾರದ ವಿಚಿತ್ರ ಆದೇಶಕ್ಕೆ ತೀವ್ರ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರವು ಹೊರಡಿಸಿದ ಒಂದು ವಿವಾದಾತ್ಮಕ ನೋಟಿಸ್‌ ಶಿಕ್ಷಣ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ನೋಟಿಸ್‌ನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಬೀದಿ ನಾಯಿಗಳ ಮಾಹಿತಿ ಸಂಗ್ರಹಿಸುವಂತೆ ಹಾಗೂ ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಈ ಆದೇಶವನ್ನು ಬೆಂಗಳೂರಿನ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ತೀವ್ರವಾಗಿ ಖಂಡಿಸಿದ್ದು, ಸರ್ಕಾರದ ಈ ನಿರ್ಧಾರವನ್ನು “ಅವೈಜ್ಞಾನಿಕ ಮತ್ತು ಅಸಮರ್ಪಕ” ಎಂದು ಟೀಕಿಸಿದ್ದಾರೆ. ಶಿಕ್ಷಕರೊಬ್ಬರು ಸರ್ಕಾರದ ಕ್ರಮವನ್ನು ಪ್ರಶ್ನಿಸಿ, “ನಮ್ಮ ಮೂಲ ಕರ್ತವ್ಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು. ನಾವೇನು ಪಾಠ ಮಾಡಬೇಕಾ, ಇಲ್ಲ ನಾಯಿಗಳ ಸಮೀಕ್ಷೆ ಮಾಡಿ ಅವುಗಳನ್ನು ಹಿಡಿಯುವ ಕೆಲಸ ಮಾಡಬೇಕಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದಿ ನಾಯಿಗಳ ನಿರ್ವಹಣೆ, ಅವುಗಳ ಸಂತಾನಹರಣ ಮತ್ತು ದತ್ತಾಂಶ ಸಂಗ್ರಹಣೆ ಸಂಪೂರ್ಣವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಥವಾ ಸಂಬಂಧಪಟ್ಟ ಪಶುಸಂಗೋಪನಾ ಇಲಾಖೆಗಳ ಜವಾಬ್ದಾರಿಯಾಗಿರುತ್ತದೆ. ಶಿಕ್ಷಕರಿಗೆ ಈ ಹೆಚ್ಚುವರಿ ಹೊರೆಯನ್ನು ಹೊರಿಸುವುದು ಸಂಪೂರ್ಣ ಅಸಮಂಜಸ ಎಂದು ಶಿಕ್ಷಣ ಸಂಸ್ಥೆಗಳು ಪ್ರತಿಪಾದಿಸಿವೆ. ಈ ಹೊಸ ಕೆಲಸದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯುಂಟಾಗಲಿದೆ ಎಂದು ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.

ಸರ್ಕಾರವು ತಕ್ಷಣವೇ ಈ ಆದೇಶವನ್ನು ಹಿಂಪಡೆಯಬೇಕು ಮತ್ತು ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಬಿಬಿಎಂಪಿ ತನ್ನ ಮೂಲ ಜವಾಬ್ದಾರಿಯನ್ನು ನಿರ್ವಹಿಸುವಂತೆ ಸೂಚಿಸಬೇಕು ಎಂದು ಎಲ್ಲಾ ಶಾಲಾ-ಕಾಲೇಜುಗಳ ಪ್ರಮುಖರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

error: Content is protected !!