ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ ಸಿನಿಮಾ ಇದೇ ಆಗಸ್ಟ್ 14,ರಂದು ಬಿಡುಗಡೆಯಾಗಲಿದ್ದು, ಅಭಿಮಾನಿಗಳ ಉತ್ಸಾಹಕ್ಕೆ ಪಾರವೇ ಇಲ್ಲದಂತಾಗಿದೆ. ಈ ಸಂದರ್ಭದಲ್ಲಿ, ಚೆನ್ನೈ ಮೂಲದ ಯುನೊ ಅಕ್ವಾ ಕೇರ್ ಸಂಸ್ಥೆಯು ವಿಶಿಷ್ಟ ನಿರ್ಧಾರ ತೆಗೆದುಕೊಂಡಿದೆ.
ಸಂಸ್ಥೆಯ ಪ್ರಕಟಣೆಯ ಪ್ರಕಾರ, ಆ ದಿನದಂದು ಹೆಚ್ಚಿನ ಉದ್ಯೋಗಿಗಳು ರಜೆ ಕೇಳುವ ಸಾಧ್ಯತೆ ಇರುವುದರಿಂದ, HR ವಿಭಾಗಕ್ಕೆ ಬರುವ ಅನೇಕ ಅರ್ಜಿಗಳನ್ನು ತಪ್ಪಿಸಲು ಆಗಸ್ಟ್ 14 ರಂದು ಎಲ್ಲಾ ಶಾಖೆಗಳಿಗೆ ರಜೆ ಘೋಷಿಸಲಾಗಿದೆ.
ಕಂಪನಿಯು ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಆಹಾರ ದಾನ, ಸಾರ್ವಜನಿಕರಿಗೆ ಸಿಹಿತಿಂಡಿ ವಿತರಣೆ ಹಾಗೂ ಉದ್ಯೋಗಿಗಳಿಗೆ ಉಚಿತ ಸಿನಿಮಾ ಟಿಕೆಟ್ ನೀಡುವ ಮೂಲಕ ರಜನಿಕಾಂತ್ ಅವರ 50 ವರ್ಷದ ಚಿತ್ರರಂಗ ಪ್ರಯಾಣವನ್ನು ಸಂಭ್ರಮಿಸಲು ಯೋಜಿಸಿದೆ.
ಈ ರಜೆ ಚೆನ್ನೈ, ಬೆಂಗಳೂರು, ತಿರುಚ್ಚಿ, ತಿರುನಲ್ವೇಲಿ, ಚೆಂಗಲ್ಪಟ್ಟು, ಮಟ್ಟುತವಾನಿ ಮತ್ತು ಅರಪಾಲಯಂ ಸೇರಿದಂತೆ ಹಲವು ಶಾಖೆಗಳಿಗೆ ಅನ್ವಯಿಸುತ್ತದೆ.
ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ಮುಂಗಡ ಬುಕಿಂಗ್
‘ಕೂಲಿ’ ಚಿತ್ರಕ್ಕೆ ದೇಶೀಯ ಮಟ್ಟದಲ್ಲಿ ಈಗಾಗಲೇ 10.27 ಕೋಟಿಗೂ ಹೆಚ್ಚು ಮುಂಗಡ ಮಾರಾಟವಾಗಿದೆ. ವಿದೇಶಗಳಲ್ಲಿ ಮೊದಲ ದಿನದ ಮುಂಗಡ ಮಾರಾಟ 37 ಕೋಟಿಯನ್ನು ದಾಟಿದ್ದು, ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಆರಂಭಿಕ ಗಳಿಕೆಗೆ ನಿರೀಕ್ಷೆ ವ್ಯಕ್ತವಾಗಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಶಕ್ತಿ ತುಂಬಿದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್, ಡ್ರಾಮಾ ಹೊಂದಿರುವ ‘ಕೂಲಿ’ ಅಭಿಮಾನಿಗಳ ಕ್ಯಾಲೆಂಡರ್‌ನಲ್ಲಿ ಐತಿಹಾಸಿಕ ದಿನವಾಗಲಿದೆ ಎಂದು ಚಿತ್ರ ವಿಮರ್ಶಕರು ಹೇಳುತ್ತಿದ್ದಾರೆ.