ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ಭೀಕರ ದುರಂತ ಸಂಭವಿಸಿದೆ. 17 ಯೋಧರಿದ್ದ ವಾಹನ ನಿಯಂತ್ರಣ ಕಳೆದುಕೊಂಡು 200 ಅಡಿ ಆಳಕ್ಕೆ ಬಿದ್ದ ಪರಿಣಾಮ 10 ಮಂದಿ ವೀರ ಯೋಧರು ಹುತಾತ್ಮರಾಗಿದ್ದಾರೆ. ಖಾನಿ ಟಾಪ್ ಬಳಿ ನಡೆದ ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಖಾನಿ ಟಾಪ್ ಬಳಿ ಭದೇರ್ವಾಹ್-ಚಂಬಾ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ವಾಹನವು ಎತ್ತರದ ಪ್ರದೇಶಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ತಕ್ಷಣವೇ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದರು.
ಎಸ್‌ಕೆ ಪಯೆನ್ ಪ್ರದೇಶದ ಬಳಿ ಮಧ್ಯಾಹ್ನ 2.30 ರ ಸುಮಾರಿಗೆ ಸಂಭವಿಸಿದ ಈ ದುರಂತಕ್ಕೆ ರಸ್ತೆ ಹದಗೆಟ್ಟಿರುವುದು ಮತ್ತು ಕೆಟ್ಟ ಹವಾಮಾನ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸೇನೆ, ‘ಪ್ರತಿಕೂಲ ಹವಾಮಾನ ಮತ್ತು ಕಳಪೆ ಗೋಚರತೆಯ ಪರಿಸ್ಥಿತಿಯಿಂದಾಗಿ ಭಾರತೀಯ ಸೇನೆಯ ವಾಹನವೊಂದು ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿದೆ. ಗಾಯಗೊಂಡ ಸೈನಿಕರನ್ನು ಕಾಶ್ಮೀರಿ ಸ್ಥಳೀಯರ ಸಹಾಯದಿಂದ ವೈದ್ಯಕೀಯ ಆರೈಕೆಗಾಗಿ ತಕ್ಷಣವೇ ಸ್ಥಳಾಂತರಿಸಲಾಯಿತು, ಇದಕ್ಕಾಗಿ ತಕ್ಷಣದ ಸಹಾಯವನ್ನು ನೀಡಿದ ನಾಗರಿಕರಿಗೆ ನಾವು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ’ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.


