ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ- 2025 ರಲ್ಲಿ ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರು ನಿರ್ಧಾರ ಕೈಗೊಂಡಿದ್ದಾರೆ.
ಗ್ಯಾರಂಟಿ ಯೋಜನೆ ಸೇರಿದಂತೆ ಈ ಹಿಂದೆ ನಡೆಸಿದ ಸಮೀಕ್ಷೆಗಳ ಹಣವನ್ನು ರಾಜ್ಯ ಸರ್ಕಾರ ಇನ್ನೂ ಪಾವತಿ ಮಾಡಿಲ್ಲ. ಹೀಗಾಗಿ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.
ಸಮೀಕ್ಷೆ ವೇಳೆ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷೆಯ ನಮೂನೆಯನ್ನು ವಿತರಿಸುವುದು ಸೇರಿ ಇತರೆ ಪೂರಕ ಕಾರ್ಯನಿರ್ವಹಿಸಬೇಕು. ಸಮೀಕ್ಷೆ ನಮೂನೆ ವಿತರಿಸುವ ಜೊತೆಗೆ ಸಮೀಕ್ಷೆಯಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ನೀಡಲು ಮುಂಚಿತವಾಗಿ ತಯಾರಿರುವಂತೆ ನೋಡಿಕೊಳ್ಳಬೇಕು. ವಿವರಗಳನ್ನು ಮೊಬೈಲ್ ಅಪ್ಲಿಕೇಶನ್ ನಲ್ಲಿ ಅಪ್ಲೋಡ್ ಸೇರಿ ಇನ್ನಿತರೆ ಕಾರ್ಯ ಮಾಡಬೇಕು.
ಇದಕ್ಕಾಗಿ 2000 ರೂ. ಗೌರವಧನ ನಿಗದಿಗೊಳಿಸಲಾಗಿದೆ. ಆದರೆ, ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ. ಈ ಹಿಂದೆ ನಡೆಸಿದ ಸಮೀಕ್ಷೆಗಳ ಹಣ ಇನ್ನೂ ಪಾವತಿಸಿಲ್ಲ. ಹೀಗಾಗಿ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.