Tuesday, October 14, 2025

ಮತ್ತೆ ಭಾರತ ತಂಡಕ್ಕೆ ಅಶ್ವಿನ್ ಕಮ್​ಬ್ಯಾಕ್! ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಕಮಾಲ್ ಮಾಡ್ತಾರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದೀಗ ಮತ್ತೊಮ್ಮೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ನವೆಂಬರ್ 7 ರಿಂದ 9 ರವರೆಗೆ ನಡೆಯಲಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್‌ನಲ್ಲಿ ಅವರು ಟೀಮ್ ಇಂಡಿಯಾ ಪರ ಆಡಲಿದ್ದಾರೆ ಎಂದು ಕ್ರಿಕೆಟ್ ಹಾಂಗ್ ಕಾಂಗ್ ಅಧಿಕೃತವಾಗಿ ಘೋಷಿಸಿದೆ. ಅಶ್ವಿನ್ ಜೊತೆಗೆ ಹಲವು ಮಾಜಿ ಭಾರತೀಯ ಕ್ರಿಕೆಟಿಗರು ಈ ವಿಶೇಷ ಸ್ವರೂಪದ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದ್ದಾರೆ.

ಹಾಂಗ್ ಕಾಂಗ್ ಸಿಕ್ಸಸ್ ಕ್ರಿಕೆಟ್ 2024ರಲ್ಲಿ ಏಳು ವರ್ಷಗಳ ಅಂತರದ ಬಳಿಕ ಪುನರಾರಂಭಗೊಂಡಿತು. ಅಭಿಮಾನಿಗಳ ರೋಮಾಂಚನ ಹೆಚ್ಚಿಸಲು ಆಯೋಜಕರು ಅಶ್ವಿನ್ ಅವರಂತಹ ತಾರೆಯರನ್ನು ಆಹ್ವಾನಿಸಿದ್ದಾರೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಶ್ವಿನ್, ಈ ವರ್ಷ ಐಪಿಎಲ್‌ನಿಂದಲೂ ನಿವೃತ್ತರಾಗಿದ್ದರು. ಇದೀಗ ಅವರು ಜಗತ್ತಿನ ವಿವಿಧ ಲೀಗ್‌ಗಳಲ್ಲಿ ಆಡಲಿದ್ದಾರೆ ಎಂಬುದನ್ನು ಘೋಷಿಸಿದ್ದು, ಹಾಂಗ್ ಕಾಂಗ್ ಸಿಕ್ಸಸ್ ಅವರ ಹೊಸ ಪ್ರಯಾಣದ ಮೊದಲ ಹೆಜ್ಜೆಯಾಗಿದೆ.

ಈ ಟೂರ್ನಮೆಂಟ್‌ನಲ್ಲಿ ಕೇವಲ ಆರು ಆಟಗಾರರ ತಂಡವಿದ್ದು, ಪ್ರತಿಯೊಬ್ಬರೂ ಒಂದು ಓವರ್ ಬೌಲಿಂಗ್ ಮಾಡಲೇಬೇಕು. ಬ್ಯಾಟ್ಸ್‌ಮನ್ 50 ರನ್ ಮಾಡಿದ ಬಳಿಕ ನಿವೃತ್ತಿಯಾಗಬೇಕು ಎಂಬ ನಿಯಮವೂ ಇದೆ. ಟಿ20 ಕ್ರಿಕೆಟ್ ಜನಪ್ರಿಯವಾಗುವುದಕ್ಕೂ ಮುನ್ನ, ಈ ಸ್ವರೂಪವು ಹೆಚ್ಚು ಅಭಿಮಾನಿಗಳನ್ನು ಸೆಳೆದಿತ್ತು. ಈಗ ಮತ್ತೆ ತನ್ನ ಸ್ಥಾನವನ್ನು ಹುಡುಕಿಕೊಳ್ಳಲು ಸಿಕ್ಸಸ್ ಪ್ರಯತ್ನಿಸುತ್ತಿದೆ.

ಅಶ್ವಿನ್ ಕಳೆದ ವರ್ಷ ಡಿಸೆಂಬರ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇದೇ ವರ್ಷದ ಆಗಸ್ಟ್ 27ರಂದು ಐಪಿಎಲ್‌ನಿಂದಲೂ ನಿವೃತ್ತಿ ಘೋಷಿಸಿ, ಭಾರತೀಯ ಕ್ರಿಕೆಟ್‌ನೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದರು. ಈ ಕಾರಣದಿಂದಾಗಿ ಅವರು ಈಗ ವಿಶ್ವದ ಯಾವುದೇ ಟೂರ್ನಮೆಂಟ್‌ನಲ್ಲಿ ಸ್ವತಂತ್ರವಾಗಿ ಭಾಗವಹಿಸಬಹುದು.

error: Content is protected !!