ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ 2025ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಟಾಸ್ ಗೆದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಉಭಯ ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಗೆದ್ದ ಹಿನ್ನೆಲೆಯಲ್ಲಿ ಪ್ಲೇಯಿಂಗ್ 11ರಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ಪಾಕ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗದೆ ಮೊದಲ ಓವರ್ ನಿಂದಲೇ ಹಿನ್ನಡೆ ಅನುಭವಿಸಿದೆ.
ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆರಂಭಿಸಿದರು. ಮೊದಲ ಎಸೆತ ವೈಡ್ ಬಾಲ್ ಆದರೂ, ತಕ್ಷಣದ ಮುಂದಿನ ಎಸೆತದಲ್ಲಿ ವಿಕೆಟ್ ಕಳೆದು ಪಾಕ್ ತಂಡಕ್ಕೆ ಆಘಾತ ತಂದರು. ಆರಂಭಿಕ ಬ್ಯಾಟರ್ ಸೈಮ್ ಅಯೂಬ್ ತಮ್ಮ ಖಾತೆ ತೆರೆಯದೇ ಜಸ್ಪ್ರೀತ್ ಬುಮ್ರಾಗೆ ಸುಲಭ ಕ್ಯಾಚ್ ನೀಡಿ ಔಟಾದರು. ಇನ್ನು ಇದರ ಬೆನ್ನಲ್ಲೇ ಎರಡನೇ ಓವರ್ ದಾಳಿಗಿಳಿದ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ, ಅನುಭವಿ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ದೊಡ್ಡ ಹೊಡೆತಕ್ಕೆ ಯತ್ನಿಸಿದ ಮೊಹಮ್ಮದ್ ಹ್ಯಾರಿಸ್, ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು.
ಮೊದಲ ಎರಡು ಓವರ್ ಅಂತ್ಯದ ವೇಳೆಗೆ ಪಾಕಿಸ್ತಾನ ತಂಡವು 7 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು.