January19, 2026
Monday, January 19, 2026
spot_img

ಏಷ್ಯಾಕಪ್ 2025: ಒಮಾನ್ ವಿರುದ್ಧ 93 ರನ್​ಗಳ ಭರ್ಜರಿ ಗೆಲುವು ದಾಖಲಿಸಿದ ಪಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಏಷ್ಯಾಕಪ್‌ನ ನಾಲ್ಕನೇ ಪಂದ್ಯದಲ್ಲಿ ಪಾಕಿಸ್ತಾನವು ಒಮಾನ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಪಾಕ್ ತಂಡ 93 ರನ್‌ಗಳ ಅಂತರದಲ್ಲಿ ಒಮಾನ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು. ಟಾಸ್ ಗೆದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.

ಆರಂಭಿಕ ಸೈಮ್ ಅಯೂಬ್ ಖಾತೆ ತೆರೆಯದೇ ಎಲ್‌ಬಿಡಬ್ಲ್ಯೂ ಔಟಾದರೂ, ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ತಂಡಕ್ಕೆ ಬಲ ತುಂಬಿದರು. ಸಾಹಿಬ್‌ಜಾದಾ ಫರ್ಹಾನ್ ಜೊತೆ ಸೇರಿ ಎರಡನೇ ವಿಕೆಟ್‌ಗೆ 85 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗಟ್ಟಿಯಾದ ನೆಲೆಯಲ್ಲಿ ನಿಲ್ಲಿಸಿದರು. ಫರ್ಹಾನ್ 29 ರನ್ ಗಳಿಸಿ ಔಟಾದ ಬಳಿಕ, ಹ್ಯಾರಿಸ್ 43 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 66 ರನ್ ಗಳಿಸಿ ಅರ್ಧಶತಕ ಪೂರೈಸಿದರು. ಅವರ ಆಟದ ಆಧಾರದ ಮೇಲೆ ಪಾಕ್ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಒಮಾನ್ ಪರ ಶಾ ಫೈಸಲ್ ಮತ್ತು ಆಮಿರ್ ಕಲೀಮ್ ತಲಾ ಮೂರು ವಿಕೆಟ್ ಪಡೆದರು.

161 ರನ್ ಗುರಿ ಬೆನ್ನಟ್ಟಿದ ಒಮಾನ್ ತಂಡ ಆರಂಭದಿಂದಲೇ ಪಾಕ್ ಬೌಲಿಂಗ್ ಎದುರು ತತ್ತರಿಸಿತು. ನಾಯಕ ಜತೀಂದರ್ ಸಿಂಗ್ ಕೇವಲ ಒಂದು ರನ್‌ಗಾಗಿ ಔಟಾದರೆ, ಆಮಿರ್ ಕಲೀಮ್ 13 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮಧ್ಯಕ್ರಮದಲ್ಲಿ ಹಮ್ಮದ್ ಮಿರ್ಜಾ 27 ರನ್ ಗಳಿಸಿ ಸ್ವಲ್ಪ ಹೋರಾಟ ನೀಡಿದರೂ, ಉಳಿದ ಬ್ಯಾಟರ್‌ಗಳು ಒಂದಂಕಿ ದಾಟಲಿಲ್ಲ. ಅಂತಿಮವಾಗಿ ಒಮಾನ್ ತಂಡ ಕೇವಲ 60 ರನ್‌ಗಳಿಗೆ ಆಲೌಟ್ ಆಯಿತು.

ಪಾಕಿಸ್ತಾನದ ಬೌಲರ್‌ಗಳು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಿತ್ತುಕೊಂಡು ಒಮಾನ್ ತಂಡವನ್ನು ಸಂಪೂರ್ಣವಾಗಿ ಹತೋಟಿಗೆ ತಂದರು. ಶಾಹೀನ್ ಶಾ ಅಫ್ರಿದಿ ಹಾಗೂ ಇತರ ಬೌಲರ್‌ಗಳ ನಿಖರ ದಾಳಿಗೆ ಒಮಾನ್ ತಂಡ ಯಾವುದೇ ತಂತ್ರ ಕಂಡುಕೊಳ್ಳಲಿಲ್ಲ.

Must Read

error: Content is protected !!