Sunday, September 21, 2025

ಏಷ್ಯಾಕಪ್: ಅಭ್ಯಾಸಕ್ಕೆ ಟೀಂ ಇಂಡಿಯಾದ 6 ಆಟಗಾರರು ಗೈರು! ತಂಡದಲ್ಲಿ ನಡೀತಿದೆ ಬದಲಾವಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಬುಧಾಬಿ: 2025 ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಒಮಾನ್ ತಂಡಗಳ ನಡುವಿನ ಗುಂಪು ಹಂತದ ಕೊನೆಯ ಪಂದ್ಯ ಇಂದು ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಜರುಗಲಿದೆ. ಈ ಪಂದ್ಯವು ಟೀಂ ಇಂಡಿಯಾಗೆ ಸೂಪರ್ ಫೋರ್ ಹಂತಕ್ಕೆ ಮುನ್ನ ಅಭ್ಯಾಸದ ಅವಕಾಶವಾಗಿದ್ದು, ಒಮಾನ್ ಈಗಾಗಲೇ ಟೂರ್ನಿಯಿಂದ ಹೊರಗುಳಿದಿರುವುದರಿಂದ ಪಂದ್ಯವು ಹೆಚ್ಚು ಪ್ರಾಮುಖ್ಯತೆ ಹೊಂದಿಲ್ಲ. ಆದಾಗ್ಯೂ, ಪಂದ್ಯಕ್ಕೂ ಮುನ್ನ 6 ಪ್ರಮುಖ ಭಾರತೀಯ ಆಟಗಾರರು ಅಭ್ಯಾಸಕ್ಕೆ ಗೈರಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಗೈರಾದ ಆಟಗಾರರು ಯಾರು?
ಒಮಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದಲ್ಲಿ ಒಂಬತ್ತು ಆಟಗಾರರು ಮಾತ್ರ ಮೈದಾನಕ್ಕಿಳಿದರು. ಆದರೆ, ಜಸ್ಪ್ರೀತ್ ಬುಮ್ರಾ, ಶಿವಂ ದುಬೆ, ಸಂಜು ಸ್ಯಾಮ್ಸನ್, ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಸೇರಿದಂತೆ ಒಟ್ಟು 6 ಮಂದಿ ಗೈರು ಹಾಜರಾಗಿದ್ದರು. ವಿಶೇಷವಾಗಿ ಗಿಲ್ ಮತ್ತು ಅಭಿಷೇಕ್ ಶರ್ಮಾ ಅಭ್ಯಾಸವನ್ನು ಸಾಮಾನ್ಯವಾಗಿ ತಪ್ಪಿಸಿಕೊಳ್ಳದ ಆಟಗಾರರಾಗಿದ್ದರೂ, ಈ ಬಾರಿ ಅವರ ಗೈರು ಹಾಜರಾತಿ ಕುತೂಹಲಕ್ಕೆ ಕಾರಣವಾಗಿದೆ.

ಅಭ್ಯಾಸ ಅವಧಿಯಲ್ಲಿ ಯುವ ವೇಗಿ ಹರ್ಷಿತ್ ರಾಣಾ ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್ ಕೌಶಲ್ಯಗಳಿಂದ ಎಲ್ಲರ ಗಮನ ಸೆಳೆದರು. ಈವರೆಗೆ ಟೂರ್ನಿಯಲ್ಲಿ ಅವರಿಗೆ ಒಂದು ಪಂದ್ಯವೂ ಸಿಕ್ಕಿರದಿದ್ದರೂ, ಒಮಾನ್ ವಿರುದ್ಧದ ಪಂದ್ಯದಲ್ಲಿ ಆಡುವ ಹನ್ನೊಂದರಲ್ಲಿ ಅವಕಾಶ ದೊರಕುವ ನಿರೀಕ್ಷೆಯಿದೆ.

ಭಾರತದ ಯಶಸ್ವಿ ಟಿ20 ಬೌಲರ್ ಅರ್ಷದೀಪ್ ಸಿಂಗ್ ಕೂಡ ಅಭ್ಯಾಸದಲ್ಲಿ ಭಾಗವಹಿಸಿದ್ದರು. ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ನಿರೀಕ್ಷೆಯಿದ್ದು, ಅರ್ಷದೀಪ್‌ಗೆ ಈ ಪಂದ್ಯದಲ್ಲಿ ಅವಕಾಶ ದೊರಕಬಹುದು ಎಂಬ ಅಂದಾಜು ವ್ಯಕ್ತವಾಗಿದೆ.

ಬ್ಯಾಟ್ಸ್‌ಮನ್‌ಗಳಿಗೂ ಅವಕಾಶ?
ಅಭ್ಯಾಸದಲ್ಲಿ ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಸಕ್ರಿಯವಾಗಿ ಭಾಗವಹಿಸಿದ್ದು, ಇವರಿಗೂ ಆಡುವ ಹನ್ನೊಂದರಲ್ಲಿ ಅವಕಾಶ ದೊರಕುವ ಸಾಧ್ಯತೆಗಳಿವೆ. ಅಭ್ಯಾಸದಲ್ಲಿ ತೋರಿದ ಅವರ ಸಮರ್ಪಣೆ ತಂಡ ನಿರ್ವಾಹಕರ ಗಮನ ಸೆಳೆದಿದೆ.

ಇದನ್ನೂ ಓದಿ