January19, 2026
Monday, January 19, 2026
spot_img

ಏಷ್ಯಾಕಪ್‌ | ಭಾರತ vs ಪಾಕಿಸ್ತಾನ: ಕುಲ್ದೀಪ್ ಯಾದವ್ ಸ್ಥಾನಕ್ಕೆ ಕುತ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ 2025ರಲ್ಲಿ ಟೀಂ ಇಂಡಿಯಾ ಉತ್ತಮ ಶುಭಾರಂಭ ಮಾಡಿದೆ. ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 57 ರನ್‌ಗಳಿಗೆ ಎದುರಾಳಿಯನ್ನು ಆಲೌಟ್ ಮಾಡಿದ್ದು, ಅದರಲ್ಲಿ ಪ್ರಮುಖ ಪಾತ್ರವಹಿಸಿದ್ದ ಕುಲ್ದೀಪ್ ಯಾದವ್. ಕೇವಲ 2.1 ಓವರ್‌ಗಳಲ್ಲಿ 7 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಆದರೆ ಇಂತಹ ಅದ್ಭುತ ಪ್ರದರ್ಶನದ ಬಳಿಕವೂ ಪಾಕಿಸ್ತಾನ ವಿರುದ್ಧದ ಮುಂದಿನ ಪಂದ್ಯದಲ್ಲಿ ಅವರಿಗೆ ಸ್ಥಾನ ಸಿಗುವುದೇ ಎಂಬ ಪ್ರಶ್ನೆ ಉದ್ಭವಿಸಿದೆ.

ಪ್ರಸಿದ್ಧ ಕ್ರಿಕೆಟಿಗ ಮತ್ತು ನಿರೂಪಕ ಸಂಜಯ್ ಮಂಜ್ರೇಕರ್ ತಮ್ಮ ಎಕ್ಸ್ ಖಾತೆಯಲ್ಲಿ ಕುಲ್ದೀಪ್ ಬಗ್ಗೆ ಹಾಸ್ಯಾತ್ಮಕ ಟೀಕೆ ಮಾಡಿದ್ದಾರೆ. “ಒಂದೇ ಓವರ್‌ನಲ್ಲಿ 3 ವಿಕೆಟ್ ಪಡೆದಿರುವ ಕುಲ್ದೀಪ್ ಮುಂದಿನ ಪಂದ್ಯವನ್ನು ಆಡದೇ ಇರಬಹುದು” ಎಂದು ಬರೆದು, ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ನ ನಿರ್ಧಾರಗಳನ್ನು ಅಣಕಿಸಿದ್ದಾರೆ.

ಕುಲ್ದೀಪ್ 2017ರಲ್ಲಿ ಭಾರತ ತಂಡಕ್ಕೆ ಪ್ರವೇಶ ಪಡೆದರೂ, ಅನೇಕ ಬಾರಿ ತಂಡದಿಂದ ಕೈಬಿಡಲಾದ ಅನುಭವ ಹೊಂದಿದ್ದಾರೆ. 2019ರ ಸಿಡ್ನಿ ಟೆಸ್ಟ್‌ನಲ್ಲಿ 5 ವಿಕೆಟ್ ಪಡೆದ ಬಳಿಕವೂ ಅವರನ್ನು ಹೊರಗಿಟ್ಟಿದ್ದರು. 2021ರಲ್ಲಿ ಕೇವಲ ಒಂದು ಟೆಸ್ಟ್ ಅವಕಾಶ ಸಿಕ್ಕಿದ್ದರೆ, 2022ರಲ್ಲಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್ ಪಡೆದ ನಂತರವೂ ಅವರು ನಿರ್ಲಕ್ಷ್ಯಕ್ಕೊಳಗಾದರು. ಕಳೆದ ವರ್ಷ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಆಡಲು ಅವಕಾಶ ಸಿಗದೇ, ಸೂಪರ್-4 ಹಂತದಲ್ಲಿ ಮಾತ್ರ ಆಡಿಸಿ ಅವರು ಉತ್ತಮ ಪ್ರದರ್ಶನ ನೀಡಿದ್ದರು.

ಅಭಿಮಾನಿಗಳ ನಿರೀಕ್ಷೆ
ಈ ಹಿಂದೆ ಹಲವು ಬಾರಿ ಉತ್ತಮ ಪ್ರದರ್ಶನ ನೀಡಿದರೂ ತಂಡದಿಂದ ಕೈಬಿಡಲ್ಪಟ್ಟಿರುವ ಕುಲ್ದೀಪ್‌ಗೆ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅವಕಾಶ ಸಿಗಬೇಕೆಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಬಲಿಷ್ಠ ಎದುರಾಳಿಯನ್ನು ಎದುರಿಸಲು ಅವರ ಸ್ಪಿನ್ ಬೌಲಿಂಗ್ ಅಗತ್ಯವೆಂದು ಕ್ರಿಕೆಟ್ ವಲಯದಲ್ಲೂ ಚರ್ಚೆಯಾಗುತ್ತಿದೆ.

Must Read