ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ನಲ್ಲಿ ಹ್ಯಾಂಡ್‌ಶೇಕ್ ವಿವಾದದ ಬಿಸಿ ಆರುವ ಮುನ್ನವೇ ಪಾಕಿಸ್ತಾನ ತಂಡ ಐಸಿಸಿಗೆ ಮತ್ತೊಂದು ದೂರು ನೀಡಿದೆ. ಪಾಕ್ ತಂಡದ ದೂರು ಭಾರತದ ಪಂದ್ಯವನ್ನು ನಿಯಂತ್ರಿಸಿದ ಟಿವಿ ಅಂಪೈರ್ ವಿರುದ್ಧವಾಗಿದೆ.
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಸಂಜು ಸ್ಯಾಮ್ಸನ್ ಹಿಡಿದ ಕ್ಯಾಚ್ ಬಗ್ಗೆ ಪಾಕಿಸ್ತಾನ ತಂಡ ಅಸಮಾಧಾನ ವ್ಯಕ್ತಪಡಿಸಿದ್ದು, ಐಸಿಸಿ ಬಳಿ ದೂರು ದಾಖಲಿಸಿದೆ.
ಉತ್ತಮ ಫಾರ್ಮ್‌ನಲ್ಲಿದ್ದ ಫಖರ್ ಜಮಾನ್ ಅವರ ವಿಕೆಟ್, ಟಿವಿ ಅಂಪೈರ್‌ನ ತಪ್ಪು ನಿರ್ಧಾರದಿಂದಾಗಿದ್ದು, ಇದು ಪಂದ್ಯದ ಗತಿಯನ್ನೇ ಬದಲಾಯಿಸಿತು ಎಂದು ಪಾಕಿಸ್ತಾನ ತಂಡ ವಾದಿಸಿದೆ.
ಪೈಕ್ರಾಫ್ಟ್ ದೂರು ಸ್ವೀಕರಿಸಲಿಲ್ಲ. ಇದು ತಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಮ್ಯಾಚ್ ರೆಫ್ರಿ ಉತ್ತರಿಸಿದರು. ಇದಾದ ನಂತರ ಪಾಕ್ ತಂಡದ ಆಡಳಿತ ಮಂಡಳಿ ಐಸಿಸಿಗೆ ದೂರು ನೀಡಿತು. ಮೂರನೇ ಓವರ್‌ನಲ್ಲಿ ಒಂಬತ್ತು ಎಸೆತಗಳಲ್ಲಿ 15 ರನ್ ಗಳಿಸಿದ್ದಾಗ ಫಖರ್ ಜಮಾನ್, ಸಂಜು ಹಿಡಿದ ಕ್ಯಾಚ್‌ಗೆ ಔಟಾದರು. ಟಿವಿ ಅಂಪೈರ್ ವಿವರವಾದ ಪರಿಶೀಲನೆಯ ನಂತರ ಔಟ್ ಎಂದು ತೀರ್ಪು ನೀಡಿದ್ದರು. ಅಂಪೈರ್ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಫಖರ್ ಜಮಾನ್ ಪೆವಿಲಿಯನ್‌ಗೆ ಮರಳಿದರು.
ಅಂಪೈರ್ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಆಟಗಾರರಾದ ವಕಾರ್ ಯೂನಿಸ್ ಮತ್ತು ಶೋಯೆಬ್ ಅಖ್ತರ್ ಟೀಕಿಸಿದ್ದಾರೆ. ಮ್ಯಾಚ್ ರೆಫ್ರಿ ಪೈಕ್ರಾಫ್ಟ್ ಅವರನ್ನು ಏಷ್ಯಾಕಪ್‌ನಿಂದ ಬದಲಾಯಿಸಬೇಕೆಂದು ಪಾಕಿಸ್ತಾನ ಒತ್ತಾಯಿಸಿತ್ತು. ಆದರೆ ಪಾಕ್ ತಂಡದ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು.
ಏಷ್ಯಾಕಪ್ ಕ್ರಿಕೆಟ್‌ನಲ್ಲಿ ಐಸಿಸಿ ಪಾಕಿಸ್ತಾನವನ್ನು ಬಿಡುತ್ತಿಲ್ಲ. ಸೂಪರ್ ಫೋರ್‌ನಲ್ಲಿ ಪಾಕಿಸ್ತಾನದ ಎಲ್ಲಾ ಪಂದ್ಯಗಳಿಗೂ ಆಂಡಿ ಪೈಕ್ರಾಫ್ಟ್ ಅವರನ್ನೇ ಮ್ಯಾಚ್ ರೆಫ್ರಿಯಾಗಿ ನೇಮಿಸಿದೆ. ಸೂಪರ್ 4 ಹಂತದಲ್ಲಿ ಭಾನುವಾರ ನಡೆದ ಭಾರತ-ಪಾಕಿಸ್ತಾನ ಪಂದ್ಯವನ್ನೂ ಪೈಕ್ರಾಫ್ಟ್ ಅವರೇ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಹ್ಯಾಂಡ್‌ಶೇಕ್ ವಿವಾದದ ನಂತರ ಪಾಕಿಸ್ತಾನದ ಎಲ್ಲಾ ಪಂದ್ಯಗಳಿಗೂ ಐಸಿಸಿ ಪೈಕ್ರಾಫ್ಟ್ ಅವರನ್ನೇ ನೇಮಿಸಿದೆ. ಮ್ಯಾಚ್ ರೆಫ್ರಿಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲು ಬಿಡುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.