ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ 2025ರ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಓಮನ್ ವಿರುದ್ಧ 21 ರನ್‌ಗಳ ಅಂತರದಿಂದ ಜಯ ಸಾಧಿಸಿದೆ. ಈಗಾಗಲೇ ಸೂಪರ್ 4ಗೆ ಅರ್ಹತೆ ಪಡೆದಿದ್ದ ಭಾರತ, ಈ ಪಂದ್ಯದಲ್ಲಿ ತನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಬೆಂಚ್ ಶಕ್ತಿಯನ್ನು ಪರೀಕ್ಷಿಸಿತು.
ಪಂದ್ಯದಲ್ಲಿ 8 ವಿಕೆಟ್ ಕಳೆದುಕೊಂಡಿದ್ದರೂ ನಾಯಕ ಸೂರ್ಯಕುಮಾರ್ ಯಾದವ್ ಕ್ರೀಸ್‌ಗೆ ಬರದೇ ಉಳಿದಿದ್ದು ಕುತೂಹಲ ಕೆರಳಿಸಿತು. ಪಂದ್ಯದ ನಂತರ ನಡೆದ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಸೂರ್ಯಕುಮಾರ್ ಯಾದವ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಓಮನ್ ತಂಡದ ಪ್ರದರ್ಶನವನ್ನು ಶ್ಲಾಘಿಸಿದ ಸೂರ್ಯಕುಮಾರ್, “ಅವರು ಅದ್ಭುತ ಕ್ರಿಕೆಟ್ ಆಡಿದ್ದಾರೆ. ವಿಶೇಷವಾಗಿ ಅವರ ಕೋಚ್ ಸುಲಕ್ಷಣ ಕುಲಕರ್ಣಿ ತುಂಬಾ ಕಠಿಣವಾಗಿರುವುದನ್ನು ನಾನು ತಿಳಿದಿದ್ದೆ. ಓಮನ್ ಆಟವನ್ನು ನೋಡುವುದು ನನಗೆ ತುಂಬಾ ಇಷ್ಟವಾಯಿತು” ಎಂದು ಹೇಳಿದ್ದಾರೆ. ಜೊತೆಗೆ ತಮ್ಮ ಆಟಗಾರರ ಬಗ್ಗೆಯೂ ಮಾತನಾಡಿ, ದೀರ್ಘ ಕಾಲದ ಬಳಿಕ ಮೈದಾನಕ್ಕಿಳಿದ ಅರ್ಶದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಎದುರಿಸಿದ ಸವಾಲುಗಳನ್ನು ಉಲ್ಲೇಖಿಸಿದರು. ಹಾರ್ದಿಕ್ ಪಾಂಡ್ಯ ಕೂಡಾ ಕೇವಲ ಸ್ವಲ್ಪ ಸಮಯ ಕ್ರೀಸ್‌ನಲ್ಲಿ ಉಳಿದಿದ್ದರೂ, ಅವರ ಹೋರಾಟವನ್ನು ಶ್ಲಾಘಿಸಿದರು.
ಮುಂದಿನ ಹಂತದ ಬಗ್ಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್, “ನಮ್ಮ ತಂಡ ಸೂಪರ್ 4 ಹಂತಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ತಿಳಿಸಿದರು. ಆದರೆ, ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯಕ್ಕೆ ಸಿದ್ಧತೆಯ ಕುರಿತು ಕೇಳಿದ ಪ್ರಶ್ನೆಗೆ ಅವರು ಪಾಕಿಸ್ತಾನ ಎಂಬ ಹೆಸರನ್ನೇ ಉಲ್ಲೇಖಿಸದೆ ಉತ್ತರ ನೀಡಿದರು.
ಭಾರತ ಈಗ ಸೂಪರ್ 4 ಹಂತದಲ್ಲಿ ಭಾನುವಾರ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ. ಬಳಿಕ ಸೆಪ್ಟೆಂಬರ್ 24ರಂದು ಬಾಂಗ್ಲಾದೇಶ ಮತ್ತು ಸೆಪ್ಟೆಂಬರ್ 26ರಂದು ಶ್ರೀಲಂಕಾ ವಿರುದ್ಧ ಭಾರತ ಸೆಣಸಲಿದೆ. ಶ್ರೀಲಂಕಾ ಕೂಡಾ ಗುಂಪು ಹಂತದಲ್ಲಿ ಒಂದೇ ಒಂದು ಪಂದ್ಯ ಸೋತಿಲ್ಲ, ಆದ್ದರಿಂದ ಆ ಪಂದ್ಯ ಭಾರತಕ್ಕೆ ಕಠಿಣ ಸವಾಲಾಗಲಿದೆ.