ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾ ಕಪ್ 2025ರಲ್ಲಿ ಸೆಪ್ಟೆಂಬರ್ 22ರಂದು ಯಾವುದೇ ಪಂದ್ಯಗಳಿರಲಿಲ್ಲ. ಎಲ್ಲಾ ತಂಡಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಸೂಪರ್ 4 ಹಂತ ತೀವ್ರ ಸ್ಪರ್ಧಾತ್ಮಕ ಹಾದಿಯಲ್ಲಿ ಸಾಗುತ್ತಿದೆ. ಈ ಹಂತದ ಮೂರನೇ ಪಂದ್ಯ ಇಂದು ಅಬುಧಾಬಿಯಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿದೆ.
ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಲಾ ಒಂದು ಪಂದ್ಯವನ್ನು ಆಡಿದರೂ ಎರಡೂ ಸೋತಿರುವುದರಿಂದ, ಇಂದಿನ ಪಂದ್ಯವು ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಆಗಿದೆ. ಸೋತ ತಂಡ ನೇರವಾಗಿ ಟೂರ್ನಿಯಿಂದ ಹೊರಗುಳಿಯಲಿದೆ.
ಬಾಂಗ್ಲಾದೇಶ ವಿರುದ್ಧ ನಡೆದ ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ಕೊನೆಯ ಓವರ್‌ನಲ್ಲಿ ಸೋತಿತ್ತು. ಆ ಪಂದ್ಯದಲ್ಲಿ ಡುನಿತ್ ವೆಲಾಲಗೆ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ, ಈ ಪಂದ್ಯಕ್ಕೆ ಮಥಿಸಾ ಪತಿರಾನ ಅಥವಾ ಮಹೇಶ್ ತೀಕ್ಷಣ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗವನ್ನು ಬಲಪಡಿಸಲು ಶ್ರೀಲಂಕಾ ಬದಲಾವಣೆ ಮಾಡುವ ನಿರೀಕ್ಷೆ ಹೆಚ್ಚು.
ಶ್ರೀಲಂಕಾದ ಸಂಭಾವ್ಯ XI: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಕಮಿಲ್ ಮಿಶ್ರಾ, ಕುಸಲ್ ಪೆರೇರಾ, ಚರಿತ್ ಅಸಲಂಕಾ (ನಾಯಕ), ದಸುನ್ ಶನಕ, ಕಮಿಂದು ಮೆಂಡಿಸ್, ವನಿಂದು ಹಸರಂಗ, ಮತಿಸಾ ಪತಿರಾನಾ/ಮಹೇಶ್ ತೀಕ್ಷಣ, ದುಷ್ಮಂತ ಚಮೀರಾ.
ಸೂಪರ್ 4 ಹಂತದ ಈ ಪಂದ್ಯದಲ್ಲಿ ಎರಡೂ ತಂಡಗಳಿಗೆ ಹಿನ್ನಡೆಯಿಲ್ಲದ ಹೋರಾಟ ಎದುರಾಗಿದೆ. ಪಾಕಿಸ್ತಾನ ಎದುರಿನ ಈ ಕಠಿಣ ಸವಾಲಿನಲ್ಲಿ ಶ್ರೀಲಂಕಾದ ಬೌಲರ್‌ಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ನಿರ್ಣಾಯಕವಾಗಲಿದೆ. ಗೆಲುವಿನತ್ತ ದಾರಿ ಹುಡುಕಲು ತಂಡದ ಆಡುವ XI ಬದಲಾವಣೆಗಳು ದೊಡ್ಡ ಪಾತ್ರ ವಹಿಸುವ ಸಾಧ್ಯತೆ ಇದೆ.