Thursday, October 2, 2025

Asia Cup: ಸಂಜು ಸ್ಯಾಮ್ಸನ್ ಪ್ಲೇಯಿಂಗ್ 11ನಲ್ಲಿ ಇರ್ತಾರಾ? ಕ್ಯಾಪ್ಟನ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಏಷ್ಯಾಕಪ್ ಇಂದು ಆರಂಭವಾಗುತ್ತಿದೆ. ಆದರೆ ಹಾಲಿ ಚಾಂಪಿಯನ್ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10ರಂದು ಅಂದರೆ ಇಂದು ಯುಎಇ ವಿರುದ್ಧ ಆಡಲಿದೆ. ಈ ಪಂದ್ಯಕ್ಕೂ ಮುನ್ನ ದೊಡ್ಡ ಚರ್ಚೆಯಾಗಿರುವುದು ಪ್ಲೇಯಿಂಗ್ ಇಲೆವೆನ್ ಆಯ್ಕೆಯ ಬಗ್ಗೆ. ವಿಶೇಷವಾಗಿ ಸಂಜು ಸ್ಯಾಮ್ಸನ್ ತಂಡದ ಹನ್ನೊಂದರಲ್ಲಿ ಇರ್ತಾರಾ ಎಂಬ ಪ್ರಶ್ನೆ ಎಲ್ಲರಿಗೂ ಕುತೂಹಲ ಮೂಡಿಸಿದೆ.

ಇತ್ತೀಚಿನ ಪಂದ್ಯಗಳಲ್ಲಿ ಟೀಂ ಇಂಡಿಯಾದ ಆರಂಭಿಕನಾಗಿ ಆಡಿದ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ತೋರಿದರೂ, ಕಳೆದ ಐದು ಪಂದ್ಯಗಳಲ್ಲಿ ಅವರು ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಮಾಡಿರಲಿಲ್ಲ. ಇದರ ನಡುವೆ ಶುಭ್‌ಮನ್ ಗಿಲ್ ಅವರನ್ನು ಉಪನಾಯಕನಾಗಿ ತಂಡಕ್ಕೆ ಸೇರಿಸಲಾಗಿದೆ. ಇದರಿಂದ ಆರಂಭಿಕ ಸ್ಥಾನಕ್ಕಾಗಿ ಗಿಲ್ ಮತ್ತು ಸಂಜು ನಡುವೆ ಪೈಪೋಟಿ ತೀವ್ರವಾಗಿದೆ. ಗಿಲ್‌ರ ಉಪನಾಯಕತ್ವದಿಂದಾಗಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಜಿತೇಶ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇಬ್ಬರು ವಿಕೆಟ್‌ಕೀಪರ್‌ಗಳಿರುವ ಸಂದರ್ಭದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂದು ಕೇಳಿದಾಗ, “ನಮ್ಮ ಸಂಪೂರ್ಣ ಗಮನ ಸಂಜು ಸ್ಯಾಮ್ಸನ್ ಮೇಲೆ ಇದೆ. ನಾಳೆ ಪಂದ್ಯದ ದಿನ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಉತ್ತರಿಸಿದರು.

ಆದರೆ ಅಭ್ಯಾಸ ಸತ್ರದಲ್ಲಿ ಕಂಡ ಚಿತ್ರಣವು ವಿಭಿನ್ನವಾಗಿತ್ತು. ಜಿತೇಶ್ ಶರ್ಮಾ ಪೂರ್ಣ ಪ್ರಮಾಣದ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುತ್ತಿರುವುದು ಗಮನ ಸೆಳೆದಿತ್ತು. ಇದರಿಂದ ಅವರನ್ನು ಪ್ರಾಥಮಿಕ ವಿಕೆಟ್‌ಕೀಪರ್‌ ಎಂದು ಪರಿಗಣಿಸಲಾಗುತ್ತಿದೆ ಎಂಬ ಊಹೆಗಳು ಬಲಗೊಂಡಿವೆ. ಹೀಗಾಗಿ ಸಂಜು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಅನುಮಾನ ಎನ್ನಲಾಗುತ್ತಿದೆ.