ಹೊಸದಿಗಂತ ಡಿಜಿಟಲ್ ಡೆಸ್ಕ್:
ತರಬೇತಿ ಪಡೆದ ಐಸಿಸ್ ಭಯೋತ್ಪಾದಕರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಕಳೆದ ಹಲವು ತಿಂಗಳುಗಳಿಂದ ಎಟಿಎಸ್ ಕಣ್ಗಾವಲಿನಲ್ಲಿದ್ದ ಈ ಮೂವರು ಶಂಕಿತರು ಭಾರೀ ದಾಳಿ ಮಾಡಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ದೊರೆತಿದೆ.
ಗಾಂಧಿನಗರದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇಬ್ಬರು ಉತ್ತರ ಪ್ರದೇಶದ ಪಶ್ಚಿಮ ಭಾಗದವರು ಹಾಗೂ ಒಬ್ಬ ಹೈದರಾಬಾದ್ ನಿವಾಸಿ ಬಂಧಿತರಾಗಿದ್ದಾರೆ. ಇವರ ವಯಸ್ಸು 30 ರಿಂದ 35 ವರ್ಷದೊಳಗೆ ಇದ್ದು, ಪಾಕಿಸ್ತಾನದ ಘಜ್ವತ್ ತಾಣದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದರು ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವ ಉದ್ದೇಶ ಇವರು ಹೊಂದಿದ್ದರು. ಆದರೆ ಎಟಿಎಸ್‌ನ ಸಮಯೋಚಿತ ಕ್ರಮದಿಂದ ಅವರ ಯೋಜನೆ ವಿಫಲಗೊಂಡಿದೆ. ಈ ಹಿಂದೆ ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದಲೂ ಇದೇ ರೀತಿಯ ಐಸಿಸ್ ಮಾಡ್ಯೂಲ್ ಪತ್ತೆಯಾಗಿತ್ತು. ಯುವಕರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚೋದಿಸಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸುವ ಪ್ರಯತ್ನ ನಡೆಯುತ್ತಿದ್ದುದಾಗಿ ತನಿಖಾ ಸಂಸ್ಥೆಗಳು ಸ್ಪಷ್ಟಪಡಿಸಿವೆ.

