ಹೊಸದಿಗಂತ ವರದಿ ಹುಬ್ಬಳ್ಳಿ:
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನಡೆದ ಗಲಾಟೆಯ ಸಂಬಂಧ ಕಾಂಗ್ರೆಸ್ ಕಾರ್ಪೊರೇಟರ್ ದೂರು ನೀಡಿದ ಹಿನ್ನೆಲೆ ಬಿಜೆಪಿಯ ಮಹಿಳಾ ಕಾರ್ಯಕರ್ತೆಯನ್ನು ಪೊಲೀಸರು ವಿವಸ್ತ್ರಗೊಳಿಸಿ ಥಳಿಸಿದ ಘಟನೆ ನಾಗರಿಕ ಸಮಾಜವೇ ತಲೆತಗ್ಗಿಸುವಂಥದ್ದು, ಇದು ಅಕ್ಷಮ್ಯ ಅಪರಾಧ ಎಂದು ಸಂಸದ ಜಗದೀಶ ಶೆಟ್ಟರ ಕಿಡಿಕಾರಿದ್ದಾರೆ.
ಈ ಕುರಿತು ಪ್ರಕಟಣೆಗೆ ತಿಳಿಸಿದ ಅವರು, ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಒಂದಿಲ್ಲೊಂದು ಸಮಾಜಘಾತಕ ಘಟನೆಗಳು ನಡೆಯುತ್ತಲೇ ಇವೆ. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಈ ತರಹದ ಕೃತ್ಯ ನಡೆದಿರುವುದು ಅತ್ಯಂತ ದುಃಖ ತರಿಸಿದೆ. ಯಾವ ಸಮಾಜವೂ ಸಹ ಮಹಿಳೆಯರನ್ನು ವಿವಸ್ತ್ರಗೊಳಿಸುವ ಮಟ್ಟಿಗೆ ಇಳಿಯಬಾರದು ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯನವರೇ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳನ್ನು ನೀಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನೀವು ಮಹಿಳೆಯರ ಕೊಲೆಗಳು, ಮಹಿಳೆಯರ ಸ್ವಾಭಿಮಾನಕ್ಕೆ ದಕ್ಕೆ ತರುವಂತ ಪ್ರಕರಣಗಳು ಪದೇಪದೇ ನಡೆಯುತ್ತವೆ ಇದು ನಿಮಗೆ ಅರಿವಿಲ್ಲವೇ? ಎಂದಿದ್ದಾರೆ.
ಮಹಿಳೆಯರಿಗೆ ಸುರಕ್ಷತೆಯೇ ಮುಖ್ಯ, ಮೊದಲು ಮಹಿಳಾ ಸುರಕ್ಷತೆಯ ಕುರಿತು ಯೋಚಿಸಿ, ಸಮಾಜದಲ್ಲಿ ಪೊಲೀಸ್ ವ್ಯವಸ್ಥೆ ಇರುವುದು ಕಾನೂನು ಸುವ್ಯವಸ್ಥೆ ಮತ್ತು ಸಮಾಜದ ಶಾಂತಿ ಕಾಪಾಡಲು ಹೊರತು, ಗೂಂಡಾಗಿರಿ ಮಾಡಲು ಅಲ್ಲ.
ಎಲ್ಲ ಘಟನೆಗಳಲ್ಲಿಯೂ ಬಿಜೆಪಿ ಕಾರ್ಯಕರ್ತರನ್ನು ಬಲಿಪಶು ಮಾಡುವ ಹುನ್ನಾರ ಕಾಂಗ್ರೆಸ್ ನಿಂದ ನಿರಂತರವಾಗಿ ನಡೆಯುತ್ತಿದೆ, ನಮ್ಮ ಬಿಜೆಪಿ ಪಕ್ಷದೊಂದಿಗೆ ನಿಮಗಿರುವ ಅಸಮಾಧಾನವನ್ನು ಆರೋಪ ಪ್ರತ್ಯಾರೋಪಗಳ ಮೂಲಕ ಹೊರಹಾಕಬೇಕೇ ಹೊರತು ಈ ರೀತಿ ಮಹಿಳಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದರೆ ನಾವು ಕೈಕಟ್ಟಿ ಕೂರುವವರು ನಾವಲ್ಲ ಎಂದು ಹೇಳಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರ ಅವರೇ ಪೊಲೀಸರಿಗೆ ಸರ್ವಾಧಿಕಾರ ನೀಡಿದ್ದೀರಿಯೇ? ಈಗಲಾದರೂ ಎಚ್ಚೆತ್ತುಕೊಳ್ಳಿ ನಮ್ಮ ಮಹಿಳಾ ಕಾರ್ಯಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನಾಗರಿಕ ಸಮಾಜ ತಲೆತಗ್ಗಿಸುವಂತಹ ಇಂತಹ ಘಟನೆಗಳು ಮುಂದೆಂದು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

