ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯಾರ್ಥಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಶರೀಫ್ ಉಸ್ಮಾನ್ ಹಾದಿ ಹತ್ಯೆಯ ನಂತರ ಬಾಂಗ್ಲಾದೇಶದ ಕೆಲ ಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಭಾರತೀಯ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದರೂ, ಬಾಂಗ್ಲಾದೇಶ ಸರ್ಕಾರವು ಆ ಆರೋಪಗಳನ್ನು ನಿರಾಕರಿಸಿದೆ.
ಜೊತೆಗೆ ಮೈಮೆನ್ಸಿಂಗ್‌ನಲ್ಲಿ ನಡೆದ ಹಿಂದೂ ಯುವಕನ ಹತ್ಯೆಯನ್ನು ಆಧಾರವಾಗಿಸಿಕೊಂಡು ವ್ಯಾಪಕ ಹಿಂಸಾಚಾರ ನಡೆಯುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.
ಸರ್ಕಾರದ ಹೇಳಿಕೆಯಂತೆ, ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಸಮುದಾಯಗಳ ನಡುವಿನ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ. ಕೆಲ ಮಾಧ್ಯಮಗಳು ವಾಸ್ತವಾಂಶಗಳನ್ನು ಮೀರಿ ವರದಿ ಮಾಡುತ್ತಿವೆ ಎಂದು ಬಾಂಗ್ಲಾ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಭದ್ರತಾ ಕಾರಣಗಳನ್ನು ಮುಂದಿಟ್ಟು, ಚಟ್ಟೋಗ್ರಾಮ್ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಭಾರತೀಯ ವೀಸಾ ಅರ್ಜಿ ಕೇಂದ್ರಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ಮರುಪರಿಶೀಲಿಸಿದ ಬಳಿಕ ಸೇವೆ ಪುನರಾರಂಭಿಸುವುದಾಗಿ ಐವಿಎಸಿ ತಿಳಿಸಿದೆ.

