Wednesday, September 3, 2025

2.3 ಕೋಟಿ ರೂ. ಮೌಲ್ಯದ ಡ್ರಗ್ಸ್ ಮಾರಾಟಕ್ಕೆ ಯತ್ನ: ನೈಜೀರಿಯಾ ಪ್ರಜೆ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾದಕ ದ್ರವ್ಯಗಳನ್ನು ಹೊಂದಿದ್ದ ಮತ್ತು ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನೈಜೀರಿಯಾ ಪ್ರಜೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ನೈಜೀರಿಯಾ ಪ್ರಜೆಯಿಂದ 2.3 ಕೋಟಿ ರೂ. ಮೌಲ್ಯದ 2.036 ಕೆಜಿ ನಿಷೇಧಿತ ಎಂಡಿಎಂಎ ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಆರೋಪಿಯ ಗುರುತನ್ನು ಬಹಿರಂಗಪಡಿಸಿಲ್ಲ.

ಪೊಲೀಸರ ಪ್ರಕಾರ, ಸೆಪ್ಟೆಂಬರ್ 1 ರಂದು, ಬಾಗಲೂರು ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ವಿದೇಶಿ ಪ್ರಜೆಯೊಬ್ಬರು ಡ್ರಗ್ಸ್ ಹೊಂದಿದ್ದಾರೆ ಮತ್ತು ಅವುಗಳನ್ನು ಬಾಗಲೂರು ಗ್ರಾಮದ ಸಂತೆ ವೃತ್ತ ಮತ್ತು ಸಿಎಂಆರ್ ಕಾಲೇಜು ನಡುವಿನ ತೆರೆದ ರಸ್ತೆಯ ಬಳಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆರೋಪಿ, ಅಪರಿಚಿತ ವ್ಯಕ್ತಿಯಿಂದ ಕಡಿಮೆ ಬೆಲೆಗೆ MDMA ಖರೀದಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ