Sunday, January 11, 2026

ಮರಕ್ಕೆ ಕಟ್ಟಿ ಶಿಕ್ಷಕಿ ಮೇಲೆ ರೇಪ್‌ಗೆ ಯತ್ನ: ಜನ ಬರ್ತಿದ್ದಂತೆಯೇ ಕಾಮುಕರು ಪರಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕಿಯನ್ನು ಮರಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತ ಯುವತಿ ಬಸರೀಕಟ್ಟೆ ಗ್ರಾಮದ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿತ್ಯ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಿಂದ ಬಸರೀಕಟ್ಟೆ ಗ್ರಾಮಕ್ಕೆ ಹೋಗಿ ಬರುತ್ತಿದ್ದರು. ಮಂಗಳವಾರ ಅದೇ ರೀತಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದರು.

ಈ ವೇಳೆ ನಾಲ್ಕೈದು ಯುವಕರ ಗುಂಪು ದಾರಿಯಲ್ಲಿ ಕಾಯುತ್ತಾ ನಿಂತಿದ್ದರು. ಶಿಕ್ಷಕಿ ಬರುತ್ತಿದ್ದಂತೆ ಅವರ ಮೇಲೆ ಎರಗಿ ದೌರ್ಜನ್ಯ ಎಸಗಿದ್ದು, ಬಳಿಕ ಅಡಿಕೆ ಮರಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಮುಂದಾಗಿದ್ದಾರೆ. ಕಿರುಚಿಕೊಳ್ಳುತ್ತಿದಂತೆ ಬಾಯಿಗೆ ಮಣ್ಣು ಹಾಕಿ ವಿಕೃತಿ ಮೆರೆದಿದ್ದಾರೆ. ಆದರೂ ಶಿಕ್ಷಕಿ ಕಿರುಚಿದ ಶಬ್ದ ಕೇಳಿಸಿಕೊಂಡ ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ. ಜನರು ಬರುತ್ತಿದ್ದಂತೆ ಆರೋಪಿಗಳು ಕಬ್ಬಿಣ ರಾಡ್‌ನಿಂದ ಶಿಕ್ಷಕಿ ತಲೆಗೆ ಹೊಡೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಅದೃಷ್ಟಾವಶಾತ್ ಸಾವಿನಿಂದ ಪಾರಾಗಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರು. ಕೂಡಲೇ ಶಿಕ್ಷಕಿಯನ್ನು ಕೊಪ್ಪ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳಲ್ಲಿ ಒಬ್ಬಾತ ಶಿಕ್ಷಕಿಯ ಎಕ್ಸ್‌ಬಾಯ್‌ಫ್ರೆಂಡ್‌ ಆಗಿದ್ದು, ಬ್ರೇಕಪ್‌ ನಂತರ ಶಿಕ್ಷಕಿ ಆತನನ್ನು ಬ್ಲಾಕ್‌ ಮಾಡಿದ್ದರು. ಈ ಸಿಟ್ಟಿನಿಂದ ಅತ್ಯಾಚಾರಕ್ಕೆ ಮುಂದಾಗಿದ್ದಾನೆ ಎಂದು ಹೇಳಲಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!