ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೃಂಗೇರಿ ಮಠದ ಪೀಠಾಧಿಪತಿಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ಡಿಸೆಂಬರ್ 20ರಂದು ಮೈಸೂರು ಅರಮನೆಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ಪ್ರಕಟಣೆ ಹೊರಡಿಸಿದೆ.
ಮೈಸೂರು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯಿಂದ ಹೊರಡಿಸಿದ ಅಧಿಕೃತ ಆದೇಶದಂತೆ, ಡಿಸೆಂಬರ್ 20ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರವರೆಗೆ ಮೈಸೂರು ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
ಈ ಸಮಯದಲ್ಲಿ ಅರಮನೆ ಆವರಣದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿರುವುದರಿಂದ ಭದ್ರತೆ ಹಾಗೂ ಶಿಸ್ತು ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಮನೆ ಆವರಣದಲ್ಲಿ ಶೃಂಗೇರಿ ಮಠದ ಪುರೋಹಿತರ ಮೂಲಕ ಶೃತಿ ಶಂಕರ ಪಠಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವೇದಘೋಷಗಳೊಂದಿಗೆ ಧಾರ್ಮಿಕ ವಾತಾವರಣ ನಿರ್ಮಾಣಗೊಳ್ಳಲಿದೆ. ಇದರೊಂದಿಗೆ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳ ಆಶೀರ್ವಚನ ಕಾರ್ಯಕ್ರಮವೂ ನಡೆಯಲಿದೆ. ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಅರಮನೆ ಮಂಡಳಿ ಅಧಿಕಾರಿಗಳು, ಗಣ್ಯರು ಹಾಗೂ ಆಹ್ವಾನಿತರು ಭಾಗವಹಿಸುವ ನಿರೀಕ್ಷೆಯಿದೆ.

