ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪಾಲಿಗೆ ಇಂದಿನಿಂದ ಅತಿ ಪ್ರಮುಖ ದಿನ. 2025-26ನೇ ಸಾಲಿನ ವಾರ್ಷಿಕ ಪರೀಕ್ಷೆಯ ಪೂರ್ವ ಸಿದ್ಧತೆಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇಂದಿನಿಂದ ಮೊದಲ ಹಂತದ ಪ್ರಿಪರೇಟರಿ ಪರೀಕ್ಷೆಗಳನ್ನು ಆರಂಭಿಸುತ್ತಿದೆ.
ಮುಖ್ಯ ಪರೀಕ್ಷೆಯ ಭಯವನ್ನು ದೂರಮಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಲು ಈ ಬಾರಿ ಒಟ್ಟು ಮೂರು ಹಂತಗಳಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲು ಮಂಡಳಿ ನಿರ್ಧರಿಸಿದೆ.
ಮೊದಲ ಹಂತ: ಜನವರಿ 5 ರಿಂದ ಜನವರಿ 10 ರವರೆಗೆ.
ಎರಡನೇ ಹಂತ: ಜನವರಿ 27 ರಿಂದ ಫೆಬ್ರುವರಿ 2 ರವರೆಗೆ.
ಮೂರನೇ ಹಂತ: ಫೆಬ್ರುವರಿ 23 ರಿಂದ ಫೆಬ್ರುವರಿ 28 ರವರೆಗೆ.
ಈ ಪರೀಕ್ಷೆಗಳನ್ನು ಕೇವಲ ಔಪಚಾರಿಕವಾಗಿ ನಡೆಸದೆ, ಮುಖ್ಯ ಪರೀಕ್ಷೆಯ ಮಾದರಿಯಲ್ಲೇ ಅತ್ಯಂತ ಪಾರದರ್ಶಕವಾಗಿ ನಡೆಸಲು ಸೂಚಿಸಲಾಗಿದೆ. ಆಯಾ ದಿನದ ಪ್ರಶ್ನೆಪತ್ರಿಕೆಗಳನ್ನು ಮುಖ್ಯ ಶಿಕ್ಷಕರ ಲಾಗಿನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲಾಗುವುದು. ವಿಶೇಷವೆಂದರೆ, ಪರೀಕ್ಷೆ ಮುಗಿದ ಮರುದಿನವೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಲು ಮಂಡಳಿ ಸೂಚನೆ ನೀಡಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಖ್ಯ ಪರೀಕ್ಷೆಗೆ ಸಜ್ಜಾಗಲು ನೆರವಾಗಲಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ನಕಲು ಪ್ರಕರಣಗಳು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಉಪನಿರ್ದೇಶಕರು ಪರೀಕ್ಷೆಯ ಸಂಪೂರ್ಣ ಉಸ್ತುವಾರಿ ವಹಿಸಲಿದ್ದಾರೆ.
ಮಾರ್ಚ್ 18 ರಿಂದ ಆರಂಭವಾಗಲಿರುವ ಅಂತಿಮ ಸಮರಕ್ಕೆ ಈ ಮೂರೂ ಹಂತದ ಪರೀಕ್ಷೆಗಳು ದಿಕ್ಸೂಚಿಯಾಗಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ.

