ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆಸೀಸ್ ತಂಡವು 43 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ತಮ್ಮದಾಗಿಸಿಕೊಂಡಿತು.
ಸರಣಿ ಸೋತಿದ್ದರೂ, ಭಾರತೀಯ ಮಹಿಳಾ ತಂಡ ತೋರಿದ ಹೋರಾಟ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ವಿಶೇಷವಾಗಿ 412 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 369 ರನ್‌ಗಳವರೆಗೆ ಹೋರಾಡಿ ಸೋಲುಂಡಿತು.
ಭಾರತೀಯ ತಂಡದ ಉಪನಾಯಕಿ ಸ್ಮೃತಿ ಮಂಧಾನ ತಮ್ಮ ಅಬ್ಬರದ ಆಟದ ಮೂಲಕ ಈ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದರು. ಕೇವಲ 50 ಎಸೆತಗಳಲ್ಲಿ ಶತಕ ಬಾರಿಸಿದ ಅವರು, ಏಕದಿನ ಪಂದ್ಯಗಳಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಆಟಗಾರ್ತಿಯಾಗಿ ಹೆಸರು ದಾಖಲಿಸಿದರು. ಇದರಿಂದ ವಿರಾಟ್ ಕೊಹ್ಲಿ ಅವರ 12 ವರ್ಷಗಳ ಹಳೆಯ ದಾಖಲೆ ಮುರಿದಂತಾಯಿತು. ಸ್ಮೃತಿ ಕೇವಲ 63 ಎಸೆತಗಳಲ್ಲಿ 17 ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 125 ರನ್ ಗಳಿಸಿದರು. ಈ ಇನ್ನಿಂಗ್ಸ್ ಅವರು ವಿಶ್ವದ ಎರಡನೇ ವೇಗದ ಮಹಿಳಾ ಶತಕ ಬಾರಿಸಿದ ಆಟಗಾರ್ತಿಯೂ ಆಗುವಂತೆ ಮಾಡಿತು.
ಸ್ಮೃತಿಯ ಜೊತೆಗೆ ನಾಯಕಿ ಹರ್ಮನ್‌ಪ್ರೀತ್ ಕೌರ್ 35 ಎಸೆತಗಳಲ್ಲಿ 52 ರನ್ ಹಾಗೂ ದೀಪ್ತಿ ಶರ್ಮಾ 72 ರನ್‌ಗಳ ಮೌಲ್ಯಯುತ ಇನ್ನಿಂಗ್ಸ್ ನೀಡಿದರು. ಸ್ನೇಹ್ ರಾಣಾ ಸಹ 35 ರನ್ ಸೇರಿಸಿದರು. ಆದರೆ ಉಳಿದ ಆಟಗಾರ್ತಿಯರಿಂದ ನಿರೀಕ್ಷಿತ ಬೆಂಬಲ ಸಿಗದೆ ಭಾರತ ತಂಡ ಗುರಿ ತಲುಪಲು ವಿಫಲವಾಯಿತು. ಆಸೀಸ್ ಪರ ಕಿಮ್ ಗ್ರಾತ್ ಮೂರು ವಿಕೆಟ್‌ಗಳನ್ನು ಪಡೆದರೆ, ಮೇಗನ್ ಶುಟ್ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 47.5 ಓವರ್‌ಗಳಲ್ಲಿ 412 ರನ್ ಗಳಿಸಿತು. ನಾಯಕಿ ಬೆತ್ ಮೂನಿ 138 ರನ್‌ಗಳ ಅದ್ಭುತ ಶತಕ ಬಾರಿಸಿದರೆ, ಜಾರ್ಜಿಯಾ ವಾಲ್ 81 ರನ್ ಹಾಗೂ ಎಲಿಸ್ ಪೆರ್ರಿ 68 ರನ್ ಗಳಿಸಿದರು. ಭಾರತದ ಪರ ಅರುಂಧತಿ ರೆಡ್ಡಿ ಮೂರು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಮತ್ತು ರೇಣುಕಾ ಸಿಂಗ್ ತಲಾ ಎರಡು ವಿಕೆಟ್ ಪಡೆದರು.