Tuesday, October 7, 2025

‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಲೇಖಕ ಡಾ. ರಾಮಚಂದ್ರ ಗುಹಾ ಆಯ್ಕೆ

ಹೊಸದಿಗಂತ ವರದಿ, ಚಿತ್ರದುರ್ಗ:

ಕರ್ನಾಟಕ ಸರ್ಕಾರ ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಮತ್ತು ಚಿಂತಕರಾದ ಡಾ. ರಾಮಚಂದ್ರ ಗುಹಾ ಅವರನ್ನು ೨೦೨೫ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಕರ್ನಾಟಕಕ್ಕೆ ಆಯ್ಕೆ ಮಾಡಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರತಿ ವರ್ಷ ನೀಡಲಾಗುವ ಈ ಗೌರವಾನ್ವಿತ ಪ್ರಶಸ್ತಿಯನ್ನು, ಗಾಂಧೀಜಿಯವರ ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಹರಡಲು ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರದಾನ ಮಾಡಲಾಗುತ್ತದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯನ್ನು ರಾಜ್ಯಾದ್ಯಂತ ಅರ್ಥಪೂರ್ಣವಾಗಿ, ಜನಸಾಮಾನ್ಯರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಆಚರಿಸಲು ರಾಜ್ಯ ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಆಚರಣೆಯ ಅಂಗವಾಗಿ ಗಾಂಧೀಜಿಯವರ ತತ್ವ, ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಜನಮನಗಳಲ್ಲಿ ಬಿತ್ತುವಲ್ಲಿ ಮಹತ್ವದ ಪಾತ್ರವಹಿಸಿರುವ ಡಾ. ರಾಮಚಂದ್ರ ಗುಹಾ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಡಾ. ರಾಮಚಂದ್ರ ಗುಹಾ ಅವರು ಭಾರತದ ಸಮಕಾಲೀನ ಇತಿಹಾಸ, ರಾಜಕೀಯ ಚಳವಳಿಗಳು, ಪರಿಸರ ಹೋರಾಟಗಳು ಹಾಗೂ ಕ್ರಿಕೆಟ್ ಕುರಿತ ತಮ್ಮ ಅಧ್ಯಯನ ಮತ್ತು ಗ್ರಂಥ ರಚನೆಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.

ಅವರ ಪ್ರಮುಖ ಕೃತಿಗಳು : ಸ್ವಾತಂತ್ರ್ಯಾನಂತರ ಭಾರತದ ಇತಿಹಾಸ, ಭಾರತೀಯ ಕ್ರಿಕೆಟ್ನ ಸಾಮಾಜಿಕ ಇತಿಹಾಸ, ಮಹಾತ್ಮ ಗಾಂಧೀಜಿಯವರ ಜೀವನಚರಿತ್ರೆಯ ಮೊದಲ ಭಾಗ, ಜೀವನಚರಿತ್ರೆಯ ಎರಡನೇ ಭಾಗ, ತಳಸ್ಥರದ ಪರಿಸರ ಚಳವಳಿಗಳ ಅಧ್ಯಯನ ಈ ಕೃತಿಗಳು ಇತಿಹಾಸ ಅಧ್ಯಯನವನ್ನು ಶ್ರೀಮಂತಗೊಳಿಸಿವೆ.

ಅಲ್ಲದೇ ಸಾಮಾನ್ಯ ಓದುಗರಿಗೂ ಸುಲಭವಾಗಿ ತಲುಪುವ ಶೈಲಿಯಲ್ಲಿ ಬರೆದಿರುವುದರಿಂದ ಸಮಾಜದಲ್ಲಿ ಚಿಂತನಮಂಥನಕ್ಕೆ ಪ್ರೇರಣೆಯಾಗಿವೆ. ವಿಶೇಷವಾಗಿ ಗಾಂಧೀ ತತ್ವಗಳನ್ನು ಆಳವಾಗಿ ವಿಶ್ಲೇಷಿಸಿ ಅವನ್ನು ಸಮಕಾಲೀನ ಭಾರತಕ್ಕೆ ಸಂಬಂಧಿಸಿದಂತೆ ಅರ್ಥೈಸುವಲ್ಲಿ ಡಾ. ಗುಹಾ ಅವರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅವರ ಗಾಂಧೀಜಿಯವರ ಎರಡು ಸಂಪುಟಗಳ ಜೀವನಚರಿತ್ರೆ ಕನ್ನಡ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ.

ರಾಜ್ಯ ಸರ್ಕಾರವು ಈ ಪ್ರಶಸ್ತಿಯ ಮೂಲಕ ಯುವ ಪೀಳಿಗೆಗೆ ಗಾಂಧೀಜಿಯವರ ಆದರ್ಶಗಳನ್ನು ಪರಿಚಯಿಸಿ, ಸತ್ಯ, ಅಹಿಂಸೆ, ಶಾಂತಿ ಮತ್ತು ಸೇವಾ ಮನೋಭಾವನೆಗಳನ್ನು ಬಲಪಡಿಸಲು ಬದ್ಧವಾಗಿದೆ. ಡಾ. ರಾಮಚಂದ್ರ ಗುಹಾ ಅವರಿಗೆ ಈ ಪ್ರಶಸ್ತಿ ಪ್ರದಾನವಾಗುವುದು, ಸಮಾಜದಲ್ಲಿ ಗಾಂಧೀಜಿಯವರ ಆದರ್ಶಗಳ ಪ್ರಚುರತೆ, ಸಂವಾದ ಮತ್ತು ಅಧ್ಯಯನಕ್ಕೆ ಪ್ರೇರಣೆಯಾದಂತಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!